

ಮಂಡ್ಯ: ಲೋಕಸಭಾ ಚುನಾವಣೆಗೆಂದು ಮಾಡಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವಿರಸ ಕಂಡುಬರುತ್ತಿದೆ. ಇದಕ್ಕೆ ಪೂರಕವೆನ್ನುವಂತಹ ಬೆಳವಣಿಗೆಗಳು ನಡೆಯುತ್ತಿವೆ.
ಕೆಲ ತಿಂಗಳ ಹಿಂದಷ್ಟೇ ಎರಡು ಪಕ್ಷದ ನಡುವೆ ಮೈತ್ರಿ ಘೋಷಣೆಯಾಗಿದೆ. ಇದಾದ ಬಳಿಕ ಜೆಡಿಎಸ್ ಮತ್ತು ಬಿಜೆಪಿಯ ಸ್ಥಳೀಯ ನಾಯಕರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಒಂದೇ ಫ್ಲೆಕ್ಸ್‌ನಲ್ಲಿಯೂ ಭಾವಚಿತ್ರ ಹಾಕಿಸಿಕೊಂಡ ಉದಾಹರಣೆಯೂ ಇದೆ. ಈ ನಡುವೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಮುರಿದು ಬಿದ್ದ ಒಗ್ಗಟ್ಟು?: ಮೈತ್ರಿ ಬಳಿಕ ಎರಡು ಪಕ್ಷದ ಮುಖಂಡರ ನಡುವೆ ಒಗ್ಗಟ್ಟಿನ ಮಂತ್ರ ಕಂಡುಬರುತ್ತಿತ್ತು. ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ್ದು ಕೂಡ ಆಯಿತು. ಅದರಲ್ಲಿಯೂ ಕೆರಗೋಡು ಗ್ರಾಮದ ಹನುಮಾನ್ ಧ್ವಜ ತೆರವು ವಿವಾದದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರತಿ ಹಂತದಲ್ಲಿಯೂ ತರಾಟೆಗೆ ತೆಗೆದುಕೊಂಡರು. ಸುಮಾರು 14 ಕಿ.ಮೀ ಪಾದಯಾತ್ರೆಯನ್ನು ಒಟ್ಟಿಗೆ ಮಾಡಿ ಗಮನಸೆಳೆದರು. ಆದರೆ ಅದ್ಯಾಕೋ ಇದ್ದಕ್ಕಿದ್ದಂತೆ ಒಗ್ಗಟ್ಟು ಮುರಿದು ಬಿದ್ದಿದೆ. ಈ ವಿಚಾರದಲ್ಲಿ ಒಂದಷ್ಟು ಗಮನಾರ್ಹ ವಿಷಯಗಳು ಗೋಚರಿಸುತ್ತವೆ. ಈ ಪೈಕಿ ಪ್ರಮುಖವಾದ ಅಂಶ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರ ಹಸ್ತಕ್ಷೇಪ. ಇವರಿಗೆ ಸಾಥ್ ಕೊಟ್ಟ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ.
ಮೈತ್ರಿಯಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಪ್ರಾಬಲ್ಯ ಹೆಚ್ಚಿದೆಯೋ ಅವರಿಗೆ ಬಿಟ್ಟುಕೊಡುತ್ತಾರೆಂದು ಹೇಳಲಾಗಿತ್ತು. ಅದರಂತೆ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುತ್ತಾರೆನ್ನುವ ಮಾತು ಗಟ್ಟಿಯಾಗಲಾರಂಭಿಸಿತು. ಇದಕ್ಕೆ ಪೂರಕವಾಗಿ ಜೆಡಿಎಸ್‌ನಲ್ಲಿ ಸರಣಿ ಸಭೆಗಳು ನಡೆದು ಅಭ್ಯರ್ಥಿಯ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಆದರೆ ಸುಮಾರು ದಿನ ಸುಮ್ಮನಿದ್ದ ಬಿಜೆಪಿ, ಇದ್ದಕ್ಕಿದ್ದಂತೆ ರಾಜಕೀಯ ಚಟುವಟಿಕೆಗೆ ಚಾಲನೆ ಕೊಟ್ಟಿತ್ತು. ಇದಕ್ಕೆ ಬೆನ್ನೆಲುಬಾಗಿ ಪ್ರೀತಂ ಹಾಗೂ ಕೆ.ಸಿ.ನಾರಾಯಣಗೌಡ ನಿಂತರು.
ಒಂದೆಡೆ ಜೆಡಿಎಸ್ ಪ್ರಾರಂಭಿಸಿದ ಹನುಮಾನ್ ಧ್ವಜ ತೆರವು ವಿವಾದ ಪ್ರತಿಭಟನೆಯನ್ನು ಬಿಜೆಪಿ ಟೇಕಾಫ್ ಮಾಡಿತು. ಮಾತ್ರವಲ್ಲದೆ ದಳವನ್ನು ಓವರ್‌ಟೇಕ್ ಮಾಡಿ ಕೆರಗೋಡು ಗ್ರಾಮದಲ್ಲಿ ಹಾಗೂ ಮಂಡ್ಯ ನಗರದಲ್ಲಿ ಮನೆ ಮನೆಗೆ ಹನುಮಾನ್ ಧ್ವಜ ಹಾರಿಸುವ ಅಭಿಯಾನವನ್ನು ನಡೆಸಿತು. ಈ ನಡುವೆ ದಳಪತಿಗಳು ಕೂಡ ವಿವಾದದಿಂದ ಅಂತರ ಕಾಯ್ದುಕೊಂಡರು. ಈ ನಡುವೆಯೇ ಸಭೆಗಳನ್ನು ಆಯೋಜಿಸುತ್ತಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬೇಡ, ನಾವೇ ಉಳಿಸಿಕೊಳ್ಳೋಣ ಎನ್ನುವ ಸಂದೇಶವನ್ನು ರವಾನಿಸಿದರು. ಇದು ಮೈತ್ರಿಯ ವಿರಸವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಒಟ್ಟಾರೆ ಚುನಾವಣೆಗೆ ಮೊದಲೇ ಮೈತ್ರಿ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆ ಕುತೂಹಲದತ್ತ ಸಾಗಿದೆ. ಮುಂದಿನ ದಿನದಲ್ಲಿ ಯಾರಿಗೆ ಮಂಡ್ಯದಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಕಟು ಟೀಕೆಗೆ ಜೆಡಿಎಸ್ ಸಿಟ್ಟು
ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಪ್ರೀತಂ ಗೌಡ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದು ಹೊರಗೆ ಕಾಣದ ಸತ್ಯವೇನು ಅಲ್ಲ. ಬದ್ಧ ವೈರಿ ದಳವನ್ನು ಮಟ್ಟ ಹಾಕಬೇಕೆಂದು ಹಾಸನದಿಂದ ಮಂಡ್ಯದವರೆಗೆ ಹಸ್ತ ಚಾಚಿದ್ದಾರೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಒಂದಷ್ಟು ತಂತ್ರವನ್ನು ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಸಾಧಿಸಿದ್ದರು. ಇದಾದ ಬಳಿಕ ಪಕ್ಷದ ಸಭೆಗಳನ್ನು ಮಾಡುತ್ತಾ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಲಾರಂಭಿಸಿದರು. ಅದನ್ನು ಮುಂದುವರೆಸುತ್ತಲೇ ಇದ್ದಾರೆ.
ಮಂಡ್ಯವನ್ನು ಏಕೆ ಜೆಡಿಎಸ್‌ಗೆ ಬಿಟ್ಟುಕೊಡಬೇಕೆನ್ನುವ ಅರ್ಥದಲ್ಲಿ ಪ್ರಶ್ನೆಯನ್ನು ರಾಜ್ಯನಾಯಕರ ಮುಂದಿಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಸ್ಥಿತ್ವ ಕಳೆದುಕೊಂಡಿದ್ದು, ಬಿಜೆಪಿಯ ವರ್ಚಸ್ಸು ಹೆಚ್ಚಿಸಿಕೊಂಡಿದೆ. ಆದ್ದರಿಂದ ಅವಕಾಶ ಕೊಡುವುದು ಬೇಡವೆಂದು ವಾದಿಸುತ್ತಿದ್ದಾರೆ. ಈ ನಡುವೆ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಪಕ್ಷದ ಚಟುವಟಿಕೆಯಿಂದ ದೂರ ಉಳಿಸಿದ್ದ ಕೆ.ಸಿ.ನಾರಾಯಣಗೌಡ ಕೂಡ ಇದೀಗ ಸಕ್ರಿಯಗೊಂಡಿದ್ದು, ಪ್ರೀತಂ ಗೌಡ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಬೆಳವಣಿಗೆ ಹಾಗೂ ಟೀಕೆಗಳು ಜೆಡಿಎಸ್ ನಾಯಕರ ಸಿಟ್ಟಿಗೆ ಕಾರಣವಾಗಿದೆ. ಕ್ಷೇತ್ರ ಯಾರಿಗೆಂದು ಘೋಷಣೆಯಾಗದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸಭೆ ಮಾಡಿದರೆ ಅಸಮಾಧಾನ ಬರುತ್ತಿರಲಿಲ್ಲ. ಬಿಜೆಪಿ ನಾಯಕರ ಕಟುವಾದ ಟೀಕೆಯ ಮಾತು ದಳಪತಿಗಳಿಗೆ ಇರಿಸು ಮುರಿಸು ತರಿಸುತ್ತಿದೆ. ಈ ವಿರಸ ಕಾಂಗ್ರೆಸ್‌ಗೆ ಅಸ್ತ್ರವಾಗುವುದರ ಮೂಲಕ ಒಡಕಿನ ಲಾಭ ಚುನಾವಣೆ ಸಮಯದಲ್ಲಿಯೂ ಬಳಸಿಕೊಂಡರೂ ಅಚ್ಚರಿಪಡಬೇಕಿಲ್ಲ.