ನಾಗಮಂಗಲ ಜೆಡಿಎಸ್‌ನಲ್ಲಿ ಗೊಂದಲ: ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮಯ್ಯ ರಾಜೀನಾಮೆ

12_04_Mdy_06(Chikonahalli Thamiha)
Published on

ಮಂಡ್ಯ: ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಮಂಡ್ಯ ಮತ್ತು ನಾಗಮಂಗಲ ಜೆಡಿಎಸ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದೆ.

ಶಾಸಕ ಸುರೇಶ್‌ಗೌಡ ಅವರ ನಡೆಯಿಂದ ಬೇಸತ್ತು ನಾಗಮಂಗಲ ತಾಲೂಕು ಜೆಡಿಎಸ್‌ನ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಚಿಕ್ಕೋನಹಳ್ಳಿ ತಮ್ಮಯ್ಯ ರಾಜೀನಾಮೆ ಸಲ್ಲಿಸಿದ್ದಾರೆ. ಸುಮಾರು 40 ವರ್ಷದಿಂದ ಪಕ್ಷದಲ್ಲಿ ಸಂಘಟನೆ ಮಾಡುತ್ತಾ ವಿವಿಧ ಹುದ್ದೆಗಳ ನಿರ್ವಹಣೆ ಮಾಡಿದ್ದರು. ಮನ್‌ಮುಲ್ ಮಾಜಿ ಅಧ್ಯಕ್ಷರೂ ಆಗಿರುವ ತಮ್ಮಯ್ಯ ಕೊಪ್ಪ ಹೋಬಳಿ ಭಾಗದ ಪ್ರಭಾವಿ ಮುಖಂಡರಾಗಿದ್ದರು.

ಆದರೆ ಕಳೆದ ಐದು ವರ್ಷದ ಅವಧಿಯಲ್ಲಿ ಸುರೇಶ್‌ಗೌಡ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ಹಲವು ಬಾರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಚುನಾವಣೆ ಸೇರಿದಂತೆ ಯಾವುದೇ ಸಭೆ ಆಯೋಜಿಸಬೇಕಾದರೂ ಗಮನಕ್ಕೆ ತರುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಬೆಂಬಲಿಗರ ಸಭೆ ಆಯೋಜಿಸಿ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ. ಇನ್ನು ಜೆಡಿಎಸ್‌ನಿಂದ ಹೊರಬಂದಿರುವ ತಮ್ಮಯ್ಯ ಅವರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆನ್ನಲಾಗಿದೆ. ಒಂದು ವೇಳೆ ‘ಕೈ’ ಹಿಡಿದರೆ ಕೊಪ್ಪ ಭಾಗದಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಹಿರಿತನ ಮುಂದಿಟ್ಟ ಚಿಕ್ಕಣ್ಣ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಿಂದ ಯಾರು ಸ್ಪರ್ಧೆ ಮಾಡುತ್ತಾರೆನ್ನುವ ಗೊಂದಲ ಮುಂದುವರೆದಿದೆ. ಈ ನಡುವೆ ಪಕ್ಷದ ಹಿರಿಯ ಮುಖಂಡರೂ ಆದ ನಗರಸಭೆ ಮತ್ತು ಮುಡಾ ಮಾಜಿ ಅಧ್ಯಕ್ಷ, ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ ಸಂಘದ ಅಧ್ಯಕ್ಷ ಎಂ.ಜೆ.ಚಿಕ್ಕಣ್ಣ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬೇಕೆಂದು ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ.

ಹಲವು ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಆದ್ದರಿಂದ ಬಿ ಫಾರ್ಮ್ ನೀಡಬೇಕೆಂದು ಹಿರಿತನವನ್ನು ಮುಂದಿಡುತ್ತಿದ್ದಾರೆ. ಒಂದು ವೇಳೆ ಅವಕಾಶ ಸಿಗದಿದ್ದರೆ ಬಂಡಾಯದ ಸ್ಪರ್ಧೆ ಮಾಡುವ ಇಂಗಿತವನ್ನು ಆಪ್ತರ ಬಳಿ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net