

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರುಗೆ ಸ್ಪರ್ಧಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ದಳಪತಿಗಳ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಅವರು ಒಂದೇ ದಿನಕ್ಕೆ ಯೂಟರ್ನ್ ಹೊಡೆದಿದ್ದಾರೆ. ಮಾತ್ರವಲ್ಲದೆ ಶಾಸಕ ಎಂ.ಶ್ರೀನಿವಾಸ್ ತಮ್ಮ ನಾಯಕರು, ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆಂದಿದ್ದ ಮಂಜು ಇದೀಗ ಶಾಸಕರ ವಿರುದ್ಧವೇ ಗಂಭೀರ ಆರೋಪ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಬಿ ಫಾರ್ಮ್ ಘೋಷಣೆ ಬಳಿಕ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ನಿಖಿಲ್‌ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಡಿ.ರಮೇಶ್ ವಿರುದ್ಧ ಮಂಜು ವಾಗ್ದಾಳಿ ನಡೆಸಿದ್ದರು. ಜತೆಗೆ ಶ್ರೀನಿವಾಸ್‌ಗೆ ನಿಷ್ಠೆಯಾಗಿರುತ್ತೇವೆ ಎನ್ನುವಂತೆ ವೀರಾವೇಷದ ಮಾತುಗಳನ್ನಾಡಿದ್ದರು. ಆದರೆ ಇದ್ದಕ್ಕಿದ್ದಂತೆ ವರಸೆ ಬದಲಿಸಿದಲ್ಲದೆ ಮಂಡ್ಯ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಸೃಷ್ಟಿಯಾದ ಗೊಂದಲಕ್ಕೆ ಶಾಸಕ ಎಂ.ಶ್ರೀನಿವಾಸ್ ಅವರೇ ಕಾರಣ. ಜತೆಗೆ ಸ್ವಾಭಿಮಾನಿ ಪಡೆ ಕಟ್ಟುವಲ್ಲಿಯೂ ಅವರೇ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ವಿಜಯಾನಂದ ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಇಲ್ಲದಿದ್ದರೆ ತಮ್ಮ ಅಳಿಯ ಯೋಗೇಶ್ ಅವರನ್ನೇ ಕಣಕ್ಕಿಳಿಸಬೇಕಿತ್ತೆನ್ನುವ ಮೂಲಕ ತಮ್ಮ ಮಾಜಿ ನಾಯಕರ ವಿರುದ್ಧವೇ ಹರಿಹಾಯ್ದಿದ್ದಾರೆ. ಮಾತ್ರವಲ್ಲದೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ನಿಷ್ಠೆ ಒಂದೇ ದಿನವಷ್ಟೇ: ಪ್ರಾರಂಭದಿಂದಲೂ ಟಿಕೆಟ್ ರೇಸ್‌ನಲ್ಲಿ ವಿಜಯಾನಂದ, ಯೋಗೇಶ್, ರಾಮಚಂದ್ರು, ಮಹಾಲಿಂಗೇಗೌಡ ಇದ್ದರು. ಈ ನಡುವೆ ನಾಮಪತ್ರ ಸಲ್ಲಿಕೆ ಹತ್ತಿರವಾಗುತ್ತಿದ್ದಂತೆ ಮಂಜು ಕೂಡ ರೇಸ್‌ಗೆ ಬಂದರು. ಮಾತ್ರವಲ್ಲದೆ ತಾವು ಕೂಡ ಆಕಾಂಕ್ಷಿ ಎಂದಿದ್ದರು. ಈ ವಿಚಾರದಲ್ಲಿ ಶ್ರೀನಿವಾಸ್ ಬೆನ್ನಿಗಿರುತ್ತೇವೆಂದು ಸ್ವಯಂ ಘೋಷಣೆ ಮಾಡಿಕೊಂಡರು.
ಈ ನಡುವೆ ರಾಮಚಂದ್ರು ಹೆಸರು ಘೋಷಣೆಯಾಗುತ್ತಿದ್ದಂತೆ ಇತ್ತ ಶ್ರೀನಿವಾಸ್ ನಿವಾಸದಲ್ಲಿ ಬಂಡಾಯ ಸಭೆ ಕರೆಯಲಾಗಿತ್ತು. ಈ ವೇಳೆ ಮಂಜು ಜೆಡಿಎಸ್ ವರಿಷ್ಠರ ವಿರುದ್ಧ ಮಾಡಿದ ಉದ್ವೇಗದ ಭಾಷಣಕ್ಕೆ ಬೆಂಬಲಿಗರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಮುಖವಾಗಿ ಕುಮಾರಸ್ವಾಮಿ ಅವರಿಗೆ ಜಿಲ್ಲಾಧ್ಯಕ್ಷರಷ್ಟೇ ಮುಖ್ಯ. ಜೆಡಿಎಸ್‌ನಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ. ಆರು ಬಾರಿ ಎಚ್‌ಡಿಕೆ ಭೇಟಿ ಮಾಡಿದರೂ ನಮಗೆ ಬೆಲೆ ಸಿಗಲಿಲ್ಲ. ಮಾತ್ರವಲ್ಲದೆ ಟಿಕೆಟ್ ಹಣಕ್ಕೆ ಮಾರಾಟವಾಗುತ್ತಿದೆ ಎಂದು ವಾಚಾಮಗೋಚರ ಟೀಕೆಗಳ ಮಳೆಯನ್ನೇ ಹರಿಸಿದ್ದರು. ಇದನ್ನು ಕಂಡು ಶ್ರೀನಿವಾಸ್ ಸೇರಿದಂತೆ ಬೆಂಬಲಿಗರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು. ಆದರೆ ಒಂದೇ ದಿನದಲ್ಲಾದ ಬೆಳವಣಿಗೆಯಿಂದ ಮಂಜು ಹೇಳಿಕೆ ವಿರುದ್ಧ ಶಾಸಕರು ಹಾಗೂ ವಿಜಯಾನಂದ ಬೆಂಬಲಿಗರು ಜತೆಗೆ ಸಾರ್ವಜನಿಕ ವಲಯದಲ್ಲಿ ಅತೃಪ್ತಿ ವ್ಯಕ್ತವಾಗುತ್ತಿದೆ.
ಮಂಜು ಮೇಲೆ ಒತ್ತಡ?: ಇದ್ದಕ್ಕಿದ್ದಂತೆ ಮಂಜು ಅವರ ನಿರ್ಧಾರ ಬದಲಾವಣೆಯಾಗುವುದರ ಹಿಂದೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ವರಿಷ್ಠರ ತೀವ್ರ ಒತ್ತಡಕ್ಕೆ ಮಣಿದು ನಿಲುವು ಬದಲಿಸಿರಬಹುದೆನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರಸಭೆಯಲ್ಲಿ 17 ಜನ ಜೆಡಿಎಸ್ ಸದಸ್ಯರಿದ್ದಾರೆ. ಆದರೂ 30 ಜನ ಸದಸ್ಯರು ಚುನಾವಣೆ ಮಾಡಲು ಸಜ್ಜಾಗಿದ್ದೇವೆ ಎನ್ನುವ ಗೊಂದಲದ ಮಾತು ಒತ್ತಡದಿಂದ ಬಂದಿರಬಹುದೆನ್ನಲಾಗುತ್ತಿದೆ.
ವಿಜಯಾನಂದ ಬೆನ್ನಿಗೆ ನಿಂತ ಶಾಸಕ: ಜೆಡಿಎಸ್ ವರಿಷ್ಠರ ವಿರುದ್ಧ ತಿರುಗಿಬಿದ್ದಿರುವ ಶ್ರೀನಿವಾಸ್, ವಿಜಯಾನಂದ, ಎಚ್.ಎನ್.ಯೋಗೇಶ್, ಮಹಾಲಿಂಗೇಗೌಡರನ್ನುಕಟ್ಟಿಹಾಕಲು ಪಕ್ಷದೊಳಗೆ ಮಾಸ್ಟರ್‌ಪ್ಲಾೃನ್ ಮಾಡಲಾಗುತ್ತಿದೆ. ಅದರಂತೆ ಎಚ್‌ಡಿಕೆ, ನಿಖಿಲ್‌ಕುಮಾರಸ್ವಾಮಿ ಖುದ್ದು ನಗರಸಭೆ ಸದಸ್ಯರು ಸೇರಿದಂತೆ ಪ್ರಮುಖ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅತ್ತ ಸ್ವಾಭಿಮಾನಿ ಪಡೆ ವಿರುದ್ಧ ಹೇಳಿಕೆಗಳು ಬರಲಾರಂಭಿಸಿವೆ.
ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಶಾಸಕ ಎಂ.ಶ್ರೀನಿವಾಸ್, ಎಚ್.ಎನ್.ಯೋಗೇಶ್, ಮಹಾಲಿಂಗೇಗೌಡ ಅವರು ಅಭ್ಯರ್ಥಿ ವಿಜಯಾನಂದ ಬೆನ್ನಿಗೆ ನಿಂತಿದ್ದಾರೆ. ಜತೆಗೆ ಜೆಡಿಎಸ್ ಮುಖಂಡರು ನೀಡುತ್ತಿರುವ ಟೀಕೆಯಿಂದ ಕೂಡಿರುವ ಹೇಳಿಕೆ ಶಾಸಕರ ನಿರ್ಧಾರವನ್ನು ಗಟ್ಟಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಸ್ವಾಭಿಮಾನಿ ಪಡೆ ಹೆಸರಿನಲ್ಲಿ ಶಾಸಕರ ನಾಯಕತ್ವದಲ್ಲಿ ಮತಯಾಚನೆ ಪ್ರಾರಂಭಿಸಲಾಯಿತು. ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಸ್ವಗ್ರಾಮ ಕೀಲಾರ ಗ್ರಾಮದಲ್ಲಿ ಮನೆದೇವರಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಇಡೀ ದಿನ ನಡೆದ ಪ್ರಚಾರದಲ್ಲಿ ಕೆವಿಎಸ್ ಸಮಕಾಲೀನ ಹಿರಿಯರು ವಿಜಯಾನಂದಗೆ ಆರ್ಶೀವಾದದ ಜತೆಗೆ ಆರ್ಥಿಕ ಸಹಾಯ ಮಾಡಿದ್ದಾರೆ.
1999ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ವಿಜಯಾನಂದ ಅವರ ತಂದೆ ಸಚ್ಚಿದಾನಂದ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಅಂದು ತಮ್ಮ ಬದಲು ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಿ ಬೆಂಬಲವಾಗಿ ನಿಂತಿದ್ದರು. ಇದೀಗ ವಿಜಯಾನಂದ ಅವರ ಬೆಂಬಲಕ್ಕೆ ಶ್ರೀನಿವಾಸ್ ನಿಂತಿರುವುದು ಕ್ಷೇತ್ರದಲ್ಲಿ ಹಿಂದಿನ ಘಟನೆಯನ್ನು ನೆನಪಿಸುತ್ತಿದೆ.