

ಮಂಡ್ಯ: ಮೂರು ದಶಕ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಮೂರು ತಿಂಗಳ ಹಿಂದೆ ಬಂದ ವ್ಯಕ್ತಿ ಮಂಡ್ಯ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಬಿ ಫಾರ್ಮ್ ನೀಡಲಾಗಿದೆ. ಪಕ್ಷದ ವರಿಷ್ಠರು ವ್ಯಕ್ತಿಗಿಂತ ಹೆಚ್ಚು ಹಣಕ್ಕೆ ಮಾನ್ಯತೆ ನೀಡಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷರೂ ಆದ ಜೆಡಿಎಸ್ ಬಂಡಾಯ ಅಭ್ಯರ್ಥಿ ಎಂ.ಜೆ.ಚಿಕ್ಕಣ್ಣ ವಾಗ್ದಾಳಿ ನಡೆಸಿದರು.
ಜೆಡಿಎಸ್ ನಾಯಕರ ಸ್ವಯಂಕೃತ ತಪ್ಪಿನಿಂದಾಗಿ ಎಲ್ಲ ಕ್ಷೇತ್ರದಲ್ಲಿಯೂ ಪಕ್ಷವು ಸಂಪೂರ್ಣವಾಗಿ ನೆಲಕಚ್ಚಲಿದೆ. ಜೆಡಿಎಸ್ ನಾಯಕರು ಹಾಸನ ಒಂದು ಕಣ್ಣಾದರೆ, ಮಂಡ್ಯ ನಮಗೆ ಒಂದು ಕಣ್ಣು ಎಂದು ಹೇಳಿಕೊಳ್ಳುತ್ತಾರೆ. ಇದೇ ಮಾತನ್ನು ರಾಮನಗರ, ಚನ್ನಪಟ್ಟಣಕ್ಕೂ ಹೋದಾಗಲೂ ಹೇಳುತ್ತಾರೆ. ಒಬ್ಬ ಮನುಷ್ಯನಿಗೆ ಇರುವುದು ಒಂದೇ ಕಣ್ಣಲ್ಲವೇ ನಾಲ್ಕು ಕಣ್ಣುಗಳು ಇರಲು ಸಾಧ್ಯವೇ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗವಾಡಿದರು.
ಹಾಸನವನ್ನು ಅಭಿವೃದ್ದಿ ಮಾಡಿದಷ್ಟು ಮಂಡ್ಯವನ್ನು ಅಭಿವೃದ್ದಿ ಮಾಡಲಿಲ್ಲ, ಮಂಡ್ಯ ದೊಡ್ಡ ಹಳ್ಳಿಯಾಗಿಯೇ ಹಿಂದುಳಿದಿದೆ. ಅಭಿವೃದ್ದಿ ಮಾಡಿದ್ದೇವೆ ಎನ್ನುವವರು ನನ್ನೊಂದಿಗೆ ದಾಖಲೆ ಸಮೇತ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರ ಟಿಕೆಟ್ ಮಾರಾಟವಾಗಿದೆ ಎಂಬ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದು ನಿಜವು ಇರಬಹುದು. ಏಕೆಂದರೆ ಬೆಂಕಿ ಇಲ್ಲದೇ ಹೊಗೆಯಾಡಲು ಸಾಧ್ಯವಿಲ್ಲ. ಶಾಸಕ ಎಂ.ಶ್ರೀನಿವಾಸ್ ಬಣದಲ್ಲಿ ಗುರುತಿಸಿಕೊಂಡಿದ್ದ ನಗರಸಭಾ ಅಧ್ಯಕ್ಷ ಎಚ್.ಎಸ್.ಮಂಜು ಒಂದೇ ರಾತ್ರಿಗೆ ಬದಲಾಗಿ ಶಾಸಕರ ವಿರುದ್ಧ ಮಾತನಾಡುತ್ತಿದ್ದಾರೆ. ಇವೆಲ್ಲವನ್ನು ಗಮನಿಸಿದ ಯಾರು ಖರೀದಿಯಾಗಿದ್ದಾರೆಂಬುದು ಜನತೆಗೆ ತಿಳಿಯುತ್ತದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆಗಿದ್ದರೂ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲಾಗುತ್ತಿದೆ. ಬೇಕಾದರೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಿ ಡಿ.ರಮೇಶ್ ವಿರುದ್ಧ ನಾನು ಸ್ಪರ್ಧೆ ಮಾಡುತ್ತೇನೆ. ಒಂದು ವೇಳೆ ಆತನಿಗಿಂತ ನಾನು ಒಂದೇ ಒಂದು ಮತ ಕಡಿಮೆ ತೆಗೆದುಕೊಂಡರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಸವಾಲು ಹಾಕಿದರು.
ಮುಖಂಡರಾದ ದಿವಾಕರ್, ಬೋರೇಗೌಡ ಇದ್ದರು.