'ಜೆಡಿಎಸ್ ಮತ್ತು ಬಿಜೆಪಿ ಜೋಡೆತ್ತು ರೀತಿಯಲ್ಲಿ ಕೆಲಸ'

'JDS and BJP working together'
Published on

ಮಡಿಕೇರಿ
ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಕೈ ಜೋಡಿಸಿರುವುದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ವಿಧಾನಪರಿಷತ್ತು ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಹ್ಮಣಿ ಹೇಳಿದರು. ದೇಶದ ಭದ್ರತೆಗೋಸ್ಕರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ಜೆಡಿಎಸ್ ಬೆಂಬಲ ಕೊಟ್ಟಿದೆ. ದೇವೇಗೌಡ ಪ್ರಧಾನಿಯಾಗಿದ್ದಾಗ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಾಡಿರುವ ಕೆಲಸಗಳು ಬಿಜೆಪಿಗೆ ಅನುಕೂಲ ಕಲ್ಪಿಸಲಿದೆ.

೨೦೧೮ರ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕೂಡ ಕೊಡಗಿಗೆ ಉತ್ತಮ ಕೆಲಸ ಮಾಡಿದ್ದರು.ಬಿಜೆಪಿಯಿಂದ ಮಂಗಳೂರಿನಲ್ಲಿ ಯೋಧ, ಬೆಂಗಳೂರು ಗ್ರಾಮಾಂತರದಲ್ಲಿ ವೈದ್ಯರಿಗೆ ಟಿಕೆಟ್ ಕೊಡಲಾಗಿದೆ. ಮಂಡ್ಯದಲ್ಲಿ ಅನಾರೋಗ್ಯ ಮಧ್ಯೆಯೂ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಕೇಂದ್ರ ಬಿಜೆಪಿ ನಾಯಕರ ಒತ್ತಾಸೆ ಮೇಲೆ ಅವರು ಅಲ್ಲಿ ಸ್ಪರ್ಧಿಸಿದ್ದಾರೆ. ಲಾಟರಿ, ಸಾರಾಯಿ ನಿಷೇಧ, ರೈತರ ಸಾಲ ಮನ್ನಾ ಮೂಲಕ ಕುಮಾರಸ್ವಾಮಿ ಮಾಡಿರುವ ಒಳ್ಳೆಯ ಕೆಲಸಗಳನ್ನು ಜನ ಸ್ಮರಿಸಿಕೊಳ್ಳುತ್ತಾರೆ. ಮೈಸೂರು ಮಹಾರಾಜರ ದೂರದೃಷ್ಟಿಯ ಕಾರ್ಯವೈಖರಿ ಪಕ್ಷದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆಲುವಿಗೆ ಪೂರಕವಾಗಲಿದೆ. ಯದುವೀರ್ ಅವರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಜತೆ ಉತ್ತಮ ಸಂಬಂಧ ಇರುವುದರಿಂದ ಕೊಡಗಿನಿಂದ ೧.೫ ಲಕ್ಷ ಮತಗಳ ಲೀಡ್ ಸಿಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ ಜಂಟಿ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಚುನಾವಣೆ ನಡೆಯಲಿದೆ. ರಾಜ್ಯದ ಎಲ್ಲಾ ೨೮ ಕ್ಷೇತ್ರಗಳಲ್ಲೂ ಎನ್‌ಡಿಎ ಮೈತ್ರಿಕೂಟ ಗೆಲ್ಲುವ ವಿಶ್ವಾಸವಿದೆ. ಯದುವೀರ್ ಅರಮನೆಗೆ ಮಾತ್ರ ರಾಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಉತ್ತಮ ಜನಪ್ರತಿನಿಧಿ ಆಗುತ್ತಾರೆ.
ಕೊಡಗಿನ ಮತದಾರು ದೇಶದ ಭದ್ರತೆ ದೃಷ್ಟಿಯಿಂದ ಎನ್‌ಡಿಎ ಬೆಂಬಲಿಸುತ್ತಾರೆ. ಯದುವೀರ್ ಗೆಲುವಿಗಾಗಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಜಿಲ್ಲೆಯಲ್ಲಿ ಜೋಡೆತ್ತು ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಉಪಾಧ್ಯಕ್ಷ ಮಹೇಶ್ ಜೈನಿ, ಜೆಡಿಎಸ್ ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಪಕ್ಷದ ಮುಖಂಡ ರವಿಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net