

ಮಂಡ್ಯ: ಎರಡು ಬಾರಿ ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಮತದಾರರು ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಸಂಸದರಾಗಿ ಆಯ್ಕೆ ಮಾಡಬೇಕು ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮನವಿ ಮಾಡಿದರು.
ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ನಗರದಲ್ಲಿ ಮತಯಾಚನೆಗೂ ಮುನ್ನ ಕಾಳಿಕಾಂಭ ದೇವಸ್ಥಾನದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಎಚ್‌ಡಿಕೆ ಆಯ್ಕೆಯಾದರೆ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಾರೆ. ಮಾತ್ರವಲ್ಲದೆ ಅವರು ಕೇಂದ್ರ ಸಚಿವರಾಗುವುದು ನಿಶ್ಚಿತವಾಗಿದ್ದು, ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಾರೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಲು ಜಿಲ್ಲೆಯ ಮತದಾರರು ಬೆಂಲ ನೀಡಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಒಗ್ಗೂಡಿ ಮತಯಾಚನೆ ಮಾಡುತ್ತಿದ್ದೇವೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಜೆಡಿಎಸ್ ಮುಖಂಡ ಅಮರಾವತಿ ಚಂದ್ರಶೇಖರ್, ಜೆಡಿಎಸ್ ತಾಲೂಕು ಅಧ್ಯಕ್ಷ ಬೂದನೂರು ಸ್ವಾಮಿ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ನಗರಸಭೆ ಸದಸ್ಯರಾದ ನಾಗೇಶ್, ಮೀನಾಕ್ಷಿ ಪುಟ್ಟಸ್ವಾಮಿ, ಮಾಜಿ ಸದಸ್ಯ ಬೋರೇಗೌಡ, ಬಿಜೆಪಿ ನಗರ ಘಟಕ ಅಧ್ಯಕ್ಷ ವಸಂತಕುಮಾರ್, ಪ್ರಧಾನ ಕಾರ್ಯದರ್ಶಿ ನವನೀತ್‌ಗೌಡ, ಕೃಷ್ಣ ಇತರರಿದ್ದರು.
ಬೆಳಗ್ಗೆ ನಗರದ 35ನೇ ವಾರ್ಡ್ ದೇವೇಗೌಡನದೊಡ್ಡಿಯಿಂದ ಸಾಗಿದ ಮತಯಾಚನೆ ಆನೆಕೆರೆ ಬೀದಿ, ಸಂಜೆ ವೇಳೆಗೆ ಕಲ್ಲಹಳ್ಳಿ, ಮರೀಗೌಡ ಬಡಾವಣೆ ಭಾಗದಲ್ಲಿ ನಡೆಯಿತು.