ಪಬ್‌ನಲ್ಲಿ ಗೂಂಡಾಗಿರಿ ಬಜರಂಗದಳ ನಿಷೇಧಿಸಿ, ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹ

Akshith suvarna
Published on

ಮಂಗಳೂರು: ನಗರದ ಬಲ್ಮಠದ ಪಬ್‌ನಲ್ಲಿ ಗೂಂಡಾಗಿರಿ ಪ್ರದರ್ಶಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಅವರ ಬಜರಂಗದಳ ಸಂಘಟನೆಯನ್ನು ನಿಷೇಧಿಸಬೇಕು ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ.


ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಬ್‌ಗೆ ಹೋಗಿ ಗ್ರಾಹಕರನ್ನು ಹೊರಗೆ ಕಳುಹಿಸಿ ಗೂಂಡಾಗಿರಿ ಪ್ರದರ್ಶಿಸಲು ಆ ಸಂಘಟನೆಗೆ ಅಧಿಕಾರ ನೀಡಿದವರು ಯಾರು? ಬಿಜೆಪಿ ಸರ್ಕಾರವೇ ಇವರನ್ನು ಕಳುಹಿಸಿತ್ತೇ? ಎಂದು ಅಕ್ಷಿತ್ ಸುವರ್ಣ ಪ್ರಶ್ನಿಸಿದ್ದಾರೆ.


2009 ರಲ್ಲಿ ಪಬ್ ದಾಳಿ ಆದಾಗಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಮತ್ತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಚುನಾವಣೆ ಸಮೀಪಿಸುತ್ತಿರುವಾಗ ಈ ಕೃತ್ಯ ನಡೆದಿದೆ. ಹಿಂದೆಯೂ ಇಂತಹ ಮತೀಯ ಸಂಘಟನೆಗಳ ಕೃತ್ಯದಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಇಲ್ಲಿ ದೇಶದ ವಿವಿಧ ಭಾಗಗಳ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಾರೆ. ಇಂತಹ ಘಟನೆಗಳು ಜಿಲ್ಲೆಯ ಘನತೆಗೆ ಕುಂದು ತರುತ್ತದೆ ಎಂದವರು ಹೇಳಿದರು.
ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕೃತ್ಯದಲ್ಲಿ ಭಾಗವಹಿಸಿದವರನ್ನು ಬಂಧಿಸಬೇಕು. ಅವರ ಹಿನ್ನೆಲೆ ಪರಿಶೀಲಿಸಬೇಕು. ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದವರು ಒತ್ತಾಯಿಸಿದರು.


ಮುಖಂಡರಾದ ಫೈಸಲ್ ರೆಹಮಾನ್, ಹಿತೇಶ್ ರೈ, ಸುಮಿತ್ ಸುವರ್ಣ, ಲತೀಶ್ ಕರ್ಕೇರ, ರಶೀದ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net