ಶಾಸಕ ಕೆ.ಶ್ರೀನಿವಾಸಗೌಡ ಮಾಡಿರುವ ಆರೋಪ ಸಾಬೀತು ಮಾಡಿದ್ರೆ ಜೀವ ಬಿಡಲು ಸಿದ್ಧ

file7b4my1f3zkgqz9b31pj
Published on

ಕೋಲಾರ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿದ ಅವಧಿಯಲ್ಲಿ ನಾನೇನಾದರೂ ಅಕ್ರಮವಾಗಿ ಮರಗಳ ಸಾಗಣೆ ಮಾಡಿ ಸಸ್ಪೆಂಡ್ ಆಗಿರುವುದು ಅಥವಾ ಸಂಸ್ಥೆಗೆ ದ್ರೋಹ ಬಗೆದಿರುವುದನ್ನು ಶಾಸಕ ಕೆ.ಶ್ರೀನಿವಾಸಗೌಡರು ಸಾಬೀತು ಪಡಿಸಿದಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದುವೆನಲ್ಲದೆ ಜೀವ ತೊರೆಯಲೂ ಸಿದ್ಧ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸವಾಲು ಹಾಕಿದರು.

ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಶ್ರೀನಿವಾಸಗೌಡರ ಹಿರಿತನ, ರಾಜಕೀಯ ಅನುಭವದ ಬಗ್ಗೆ ಅಪಾರ ಗೌರವವಿದೆ. ಆದರೆ ನನ್ನ ಮೇಲೆ ನಿರಾಧಾರ ಆರೋಪ ಮಾಡಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದರು.

1985ರಲ್ಲಿ ನಾನು ಕೆಎಸ್‌ಆರ್‌ಟಿಸಿ ಸೇರಿದೆ, 88ರಲ್ಲಿ ಆಗಿನ ಮುಳಬಾಗಿಲು ಶಾಸಕರಾಗಿದ್ದ ಆರ್.ವೆಂಕಟರಾಮಯ್ಯ ಅವರ ಶಿಫಾರಸಿನ ಮೂಲಕ ಶಿರಸಿಯಿಂದ ಬೆಂಗಳೂರು ಬಿಟಿಎಸ್‌ಗೆ ವರ್ಗಾವಣೆ ಮಾಡಿಸಿಕೊಂಡು 11 ವರ್ಷ ಸಂಸ್ಥೆಯಲ್ಲಿದ್ದು 1996ರಲ್ಲಿ ರಾಜೀನಾಮೆ ನೀಡಿ ಕೋಳಿ ಉದ್ಯಮಕ್ಕೆ ಕಾಲಿಟ್ಟೆ. ಹಂತ-ಹಂತವಾಗಿ ಬೆಳೆದು ಎಂಎಲ್‌ಸಿ ಆಗಿದ್ದೇನೆ. ಶ್ರೀನಿವಾಸಗೌಡರು 1995ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದು, ಮರಗಳ್ಳತನ ಆಧಾರದ ಮೇಲೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿರುವುದು ಬೇಸರ ತಂದಿದೆ ಎಂದರು.

ನಾನು ಯಾರನ್ನೂ ಓಲೈಸಿಕೊಂಡು ಸ್ಥಾನಮಾನ ಪಡೆದಿಲ್ಲ, ನನಗೆ ರಾಜಕೀಯಕ್ಕಿಂತ ಜನಸೇವೆ ಮುಖ್ಯ, ಸಾರಿಗೆ ಸಂಸ್ಥೆಯಲ್ಲಿ ನನಗೆ ಅನೇಕ ಮಂದಿ ಆಪ್ತರಿದ್ದಾರೆ, ನನ್ನ ಸೇವಾವಧಿಯ ಮಾಹಿತಿ ಸಂಸ್ಥೆಯ ದಾಖಲಾತಿಯಲ್ಲಿ ಇಂದಿಗೂ ದೊರೆಯುತ್ತದೆ, ಮರ ಸಾಗಣೆ ಇನ್ನಿತರ ಆರೋಪದಡಿ ನನಗೆ ಶಿಕ್ಷೆ ಆಗಿರುವುದಕ್ಕೆ ಸಾಕ್ಷಿ ಇದ್ದರೆ ಬಹಿರಂಗ ಪಡಿಸಿದರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದರು.

ಜೆಡಿಎಸ್ ಅಪ್ಪ, ಮಕ್ಕಳ ಪಕ್ಷ ಎಂದು ಆರೋಪಿಸುವ ಶಾಸಕರು ಪಕ್ಷಕ್ಕೆ ತಮ್ಮಿಂದ ಆಗುತ್ತಿರುವ ದ್ರೋಹದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು, ಪಕ್ಷದಲ್ಲಿ ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲಿ ಎಂದರು.

ಶಾಸಕರ ಬಗ್ಗೆಯೂ ಅನೇಕ ಆರೋಪಗಳಿವೆ, ಇ್ಕೆೆ ಸಂಸ್ಥೆಯಲ್ಲಿ ಆಗಿರುವ ಅಕ್ರಮಗಳ ಸಂಬಂಧ ಸಿಬಿಐಯಿಂದ ತನಿಖೆ ನಡೆಯಲು ಕೇಂದ್ರ ಮುಂದಾಗಿದ್ದಾಗ ಯಾರ ಮೂಲಕ ತಡೆ ಮಾಡಿಸಿದರು ಎಂಬುದು ಗೊತ್ತಿದೆ, ಈ ವಿಚಾರ ಕೆಣಕುವುದಕ್ಕೆ ಇದು ಸಮಯವಲ್ಲ, ನನ್ನ ವಿರುದ್ಧ ಅನಗತ್ಯ ಆರೋಪ ಮಾಡುವುದನ್ನು ನಿಲ್ಲಿಸದಿದ್ದರೆ ಅವರ ಜಾತಕ ಬಯಲು ಮಾಡುವೆ ಎಂದು ಎಚ್ಚರಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಎಂಎಲ್‌ಸಿ ಆದೆ. ಆದರೆ ಅನವಶ್ಯಕ ಚರ್ಚೆ ನೋಡಿ ಏಕಾದರೂ ಎಂಎಲ್‌ಸಿ ಆದೆ ಎಂದು ಅನಿಸುತ್ತಿದೆ. ಅನೇಕ ಬಾರಿ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರೋಣ ಅನಿಸುತ್ತದೆ, ಶ್ರೀನಿವಾಸಗೌಡರ ಆರೋಪದಿಂದ ಇನ್ನಷ್ಟು ಬೇಸರವಾಗಿದೆ, ನನ್ನ ವಿರುದ್ಧ ಸುಳ್ಳು ಆರೋಪ ಮುಂದುವರಿಸಿದಲ್ಲಿ ಕಾನೂನು ರೀತಿ ಉತ್ತರ ಕೊಡುತ್ತೇನೆ.

ಇಂಚರ ಗೋವಿಂದರಾಜು, ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net