ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ; ಬಿಜೆಪಿ ಆಡಳಿತಕ್ಕೆ ಬೇಸತ್ತಿದ್ದಾರೆ ಜನ ; ಶಾಸಕ ಪರಮೇಶ್ವರ್ ಆರೋಪ

28 GubC 1
Published on

ಗುಬ್ಬಿ : ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ವಿಧಾನ ಪರಿಷತ್ ಚುನಾವಣೆ ನಡೆಸುತ್ತಿವೆ ಎಂದು ಶಾಸಕ ಡಾ.ಜಿ.ಪರಮೇಶ್ವರ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ಸ್ಥಾನಗಳ ಪೈಕಿ ಕೇವಲ 6 ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ನೋಡಿದಾಗ ಬಿಜೆಪಿಗೆ ಲಾಭ ತರುವ ಕೆಲಸ ಜೆಡಿಎಸ್ ಮಾಡುತ್ತಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಹೊರೆಯಾಗಿ ಆಡಳಿತ ಮಾಡುತ್ತಿವೆ. ಬಿಜೆಪಿ ಸರ್ಕಾರಕ್ಕೆ ಆಡಳಿತ ವಿಕೇಂದ್ರೀಕರಣದ ಆಸಕ್ತಿಯೇ ಇಲ್ಲ. ಹಾಗಾಗಿ ಸ್ಥಳೀಯ ಆಡಳಿತಕ್ಕೆ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಿಲ್ಲ. ಗ್ರಾಮಾಂತರದ ರಸ್ತೆಗಳನ್ನು ನಿರ್ಮಿಸಲೂ ಬಿಜೆಪಿ ಸರ್ಕಾರದಿಂದ ಸಾಧ್ಯವಾಗಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಒಂದಷ್ಟು ರಸ್ತೆ ಕಾಮಗಾರಿ ನಡೆಯುತ್ತಿರುವುದು ಬಿಟ್ಟರೆ ಗ್ರಾಮಾಂತರದಲ್ಲಿ ಸರ್ಕಾರದ ಅಭಿವೃದ್ಧಿ ಶೂನ್ಯ. ಕಳೆದ ಬಾರಿ ರಾಜೇಂದ್ರ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿ ಬಹುಮತದಿಂದ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹೊಸಬರು. ನಮ್ಮ ಅಭ್ಯರ್ಥಿ ಜಿಲ್ಲೆಗೆ ಚಿರಪರಿಚಿತರು ಎಂದು ಹೇಳುವ ಮೂಲಕ ನಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.

ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮಾತನಾಡಿ, ಕಳೆದ ಬಾರಿ ಅಲ್ಪ ಅಂತರದಲ್ಲಿ ಸೋತ ನಾನು ಜಿಲ್ಲೆಗೆ ಚಿರಪರಿಚಿತ. ಆರು ತಿಂಗಳಿಂದ ಪ್ರವಾಸ ನಡೆಸಿರುವ ನನಗೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದರಿಂದ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಸೋಲಿಸಿದ್ದು, ಬಿಜೆಪಿಯೇ ಹೊರತು ನಾನಲ್ಲ. ಹಾಗಂತ ದೇವೇಗೌಡರೂ ಸಹ ಎಲ್ಲಿಯೂ ಹೇಳಿಲ್ಲ. ಅವರು ಹೇಳಿರುವುದು, ನನ್ನನ್ನು ಸೋಲಿಸಿದವರನ್ನು ಸೋಲಿಸಿ ಎಂದು. ಹಾಗಾಗಿ ಬಿಜೆಪಿಯನ್ನು ಸೋಲಿಸಿ ಎಂದು ಅವರೇ ಕರೆ ಕೊಟ್ಟಿದ್ದಾರೆ. ಅವರ ಮಾತನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು. ಮಧುಗಿರಿಯಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತ ಬಿದ್ದಿದ್ದು ಸರಿ. ಆದರೆ ಅಲ್ಲಿ ಜೆಡಿಎಸ್ ಶಾಸಕರೇ ಇದ್ದದ್ದು ಎನ್ನುವುದು ಮರೆಯುವಂತಿಲ್ಲ ಎಂದು ಹೇಳಿದರು.

ಮಾಜಿ ಶಾಸಕ ಶಫೀ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಮುಖಂಡ ಚಂದ್ರಶೇಖರಗೌಡ, ತುಮಕೂರು ನಗರಪಾಲಿಕೆ ಸದಸ್ಯ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ನಿಂಬೆಕಟ್ಟೆ ಜಯಣ್ಣ , ಮುಖಂಡರಾದ ಹೊನ್ನಗಿರಿಗೌಡ, ಜಿ.ಎಸ್.ಪ್ರಸನ್ನಕುಮಾರ್, ಎಂ.ವಿ.ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net