ಜೆಡಿಎಸ್ ಕಟ್ಟಿ ಬೆಳೆಸಿದವರು ಕಾರ್ಯಕರ್ತರು ; ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

20 tvk 02
Published on

ತುರುವೇಕೆರೆ : ಜೆಡಿಎಸ್‌ಗೆ ಯಾರೂ ಶಾಕ್ ಕೊಡಲು ಸಾಧ್ಯವಿಲ್ಲ, ರಾಜ್ಯದಲ್ಲಿ ಜಾತ್ಯತೀತ ಜನತಾ ದಳ ಇನ್ನೂ ಜೀವಂತವಾಗಿದೆ. ಕಾರ್ಯಕರ್ತರು ಇರುವರೆವಿಗೂ ಪಕ್ಷವನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು, ಜೆಡಿಎಸ್ ಉಳಿಸಿ ಬೆಳೆಸಿರುವುದು ಸಾವಿರಾರು ಕಾರ್ಯಕರ್ತರು. ಪಕ್ಷದಲ್ಲಿ ಅಕಾರ ಅನುಭವಿಸಿ ಜೆಡಿಎಸ್ ಬಗ್ಗೆ ಅಪಪ್ರಚಾರ ಮಾಡುವಂತಹ ವ್ಯಕ್ತಿಗಳಿಗೆ ಕಾರ್ಯಕರ್ತರು ಪ್ರೋತ್ಸಾಹ ನೀಡಬಾರದು. ಪಕ್ಷದಿಂದ ಶಾಸಕ, ಎಂಎಲ್‌ಸಿಗಳಾಗಿ ಬೇರೆ ಪಕ್ಷಗಳ ಕದ ತಟ್ಟುತ್ತಿರುವ ನಾಯಕರನ್ನು ತಿರಸ್ಕಾರ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ತೆರೆದಿದೆ ಬಾಗಿಲು: ಜೆಡಿಎಸ್‌ಗೆ ಬರುವವರಿಗೂ ಪಕ್ಷದ ಬಾಗಿಲು ಸದಾ ತೆರೆದಿದೆ. ನಾನು ಪಕ್ಷಕ್ಕೆ ಬರುವ ಮುಂಚೆಯೇ ಕಾರ್ಯಕರ್ತರು ಪಕ್ಷ ಕಟ್ಟಿ ಬೆಳೆಸಿದ್ದಾರೆ ಹೊರತು ಮುಖಂಡರಲ್ಲ. ಜೆಡಿಎಸ್‌ನಿಂದ ಹೊರ ಹೋಗುವವರು ಹೋಗಬಹುದು ಎಂದು ಕುಮಾರಸ್ವಾಮಿ ತಿಳಿಸಿದರು.

ದೇವೇಗೌಡರ ಬಗ್ಗೆ ನೀರಿನ ವಿಚಾರದಲ್ಲಿ ಅಪಪ್ರಚಾರ ಮಾಡಿದ್ದರು. ಈಗ ಏನು ನಡೆಯುತ್ತಿದೆ ಎಂದು ಎಲ್ಲವನ್ನೂ ಗಮನಿಸುತ್ತಿದ್ದೇನೆ. ದೇವೇಗೌಡರು ಇಲ್ಲದಿದ್ದರೆ ಕಾವೇರಿ ಉಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ಇದಕ್ಕೂ ಮುನ್ನ ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಅಪಾರ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಹಾಕಿ ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡು ಸನ್ಮಾನಿಸಿದರು. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮುಖಂಡರು ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net