

ಚಿತ್ರದುರ್ಗ: ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಜೆ.ಎನ್. ಕೋಟೆ ಗುರುಸಿದ್ದಪ್ಪ ಅವರು ತಮ್ಮ ಜೀವನ ಹಾಗೂ ರಾಜಕೀಯದಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ಬದುಕಿದ್ದರು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಗುರುಸಿದ್ದಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಸಿದ್ದಪ್ಪ ಅವರು ಎಂದಿಗೂ ಹಣ, ಅಧಿಕಾರಕ್ಕೆ ಆಸೆಪಡದೆ ತಮ್ಮ ಪಾಲಿನ ಕೆಲಸ ಮಾಡುತ್ತಾ ನಮ್ಮೆಲ್ಲರಿಗೂ ಮಾರ್ಗದರ್ಶಿಗಳಾಗಿದ್ದರು. ಜಿಲ್ಲೆಯಲ್ಲಿ ಜೆಡಿಎಸ್ ಬೆಳವಣಿಗೆಯಲ್ಲಿ ಅವರು ಪ್ರಮುಖ ವಹಿಸಿದ್ದರು ಎಂದರು.
ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷ ಡಿ. ಯಶೋದರ ಮಾತನಾಡಿ, ಗುರುಸಿದ್ದಪ್ಪ ಅವರ ಅಗಲಿಕೆ ಅವರ ಕುಟುಂಬ, ಅಭಿಮಾನಿಗಳು ಹಾಗೂ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಎಂ. ಜಯಣ್ಣ ಮಾತನಾಡಿ, ಗುರುಸಿದ್ದಪ್ಪ ಅವರನ್ನು ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು ಎಂದರು.
ಮಹಾ ಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿ ನಾಯಕ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ. ಶೇಖರ್, ಸಣ್ಣ ತಿಮ್ಮಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಪರಮೇಶ್ವರಪ್ಪ, ಪ್ರತಾಪ್ ಜೋಗಿ, ರುದ್ರಪ್ಪ, ಚಂದ್ರಣ್ಣ, ಚಂದ್ರಶೇಖರ್ ಮಾತನಾಡಿದರು.
ಎಂ.ಕೆ.ಹಟ್ಟಿ ಈರಣ್ಣ, ರಾಘವೇಂದ್ರ, ಕರಿಬಸಪ್ಪ, ಲಿಂಗರಾಜು, ಗೀತಾ, ರಮೇಶ್, ಹನುಮಂತರಾಯಪ್ಪ, ಗುರುಸಿದ್ದಪ್ಪ ಅವರ ಪತ್ನಿ ಸಾಕಮ್ಮ, ಪುತ್ರ ಸಿದ್ದೇಶ್, ಹನುಮಂತರಾಯಪ್ಪ ಇತರರು ಇದ್ದರು.