ಜೆಡಿಎಸ್ ಅಭ್ಯರ್ಥಿ ಯಾರೆಂಬ ಕುತೂಹಲ

03mdk03 Muttappa
Published on

ಮಡಿಕೇರಿ:
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಚುನಾವಣೆ ಅಧಿಸೂಚನೆ ಹೊರಬಿದ್ದರೂ ಅಂತಿಮವಾಗಿಲ್ಲ. ಗುರುವಾರದಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು ಪಕ್ಷದ ಅಧಿಕೃತ ಹುರಿಯಾಳು ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಿದೆ. ನಾಪಂಡ ಮುತ್ತಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಶನಿವಾರ (ಏ.೧೫) ನಾಮಪತ್ರ ಸಲ್ಲಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಟಿಕೆಟ್ ವಂಚಿತ ಹರಪಳ್ಳಿ ರವೀಂದ್ರ ಜೆಡಿಎಸ್ ಹೈಕಮಾಂಡ್ ಸಂಪರ್ಕ ಬೆಳೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ದಿನದಿಂದಲೂ ವಿಧಾನಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರಕ್ಕೆ ತಾನೇ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಬಂದಿರುವ ನಾಪಂಡ ಮುತ್ತಪ್ಪ ಈ ನಿಟ್ಟಿನಲ್ಲಿ ತಳ ಮಟ್ಟದಿಂದಲೂ ಸಾಕಷ್ಟು ಕೆಲಸ ಮಾಡಿಕೊಂಡು ಬಂದಿದ್ದಾರೆ. ಬೆಂಬಲಿಗರು, ಅಭಿಮಾನಿಗಳು ಕೂಡ ಇದನ್ನೇ ನಂಬಿಕೊಂಡು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಜೆಡಿಎಸ್‌ನಿಂದ ಪ್ರಕಟವಾದ ಮೊದಲ ಪಟ್ಟಿಯಲ್ಲಿ ನಾಪಂಡ ಮುತ್ತಪ್ಪ ಹೆಸರು ಇರಲಿಲ್ಲ. ಇದು ಹಲವಾರು ಅನುಮಾನಗಳಿಗೆ ಕಾರಣವಾದರೂ ಖುದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಾ.ರಾ. ಮಹೇಶ್ ಸ್ಪಷ್ಟ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಆಶಾಭಾವನೆ ಕಳೆದುಕೊಳ್ಳದೆ ಟಿಕೆಟ್ ನಿರೀಕ್ಷೆಯಲ್ಲೇ ನಾಪಂಡ ಮುತ್ತಪ್ಪ ಪಕ್ಷ ಸಂಘಟನೆ ಮುಂದುವರಿಸಿದ್ದಾರೆ.

ಮಡಿಕೇರಿ ಕ್ಷೇತ್ರಕ್ಕೆ ಇನ್ನು ಕೂಡ ಜೆಡಿಎಸ್ ಅಧಿಕೃತ ಅಭ್ಯರ್ಥಿ ಹೆಸರು ಘೋಷಣೆ ಆಗಿಲ್ಲ. ಆದರೂ ನಾಮಪತ್ರ ಸಲ್ಲಿಕೆಗೆ ನಾಪಂಡ ಮುತ್ತಪ್ಪ ದಿನಾಂಕ ನಿಗದಿ ಮಾಡಿದ್ದಾರೆ. ಶನಿವಾರ (ಏ.೧೫) ಮಧ್ಯಾಹ್ನ ೧೨.೩೦ಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ.

ಆದರೆ ಇದೀಗ ಕಾಂಗ್ರೆಸ್ ಟಿಕೆಟ್ ವಂಚಿತ ಹರಪಳ್ಳಿ ರವೀಂದ್ರ ಜೆಡಿಎಸ್ ಹೈಕಮಾಂಡ್ ಸಂಪರ್ಕದಲ್ಲಿರುವುದು ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಷಯದಲ್ಲಿ ಗೊಂದಲ ಮೂಡುವಂತೆ ಆಗಿದೆ. ರವೀಂದ್ರ ಅವರೇ ತಿಳಿಸಿರುವಂತೆ ಕಾಂಗ್ರೆಸ್‌ನಿಂದ ತಮಗೆ ಟಿಕೆಟ್ ಸಿಗದಿರುವ ವಿಷಯ ತಿಳಿಯುತ್ತಿದ್ದಂತೆಯೇ ಹೆಚ್.ಡಿ. ಕುಮಾರಸ್ವಾಮಿ ಅವರೇ ಸಂಪರ್ಕ ಮಾಡಿ ಜೆಡಿಎಸ್‌ಗೆ ಆಹ್ವಾನಿಸಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸುವಂತೆಯೂ ಹೇಳಿದ್ದಾರೆ ಎನ್ನುತ್ತಾರೆ. ಈ ಸಂಬಂಧ ಈಗಾಗಲೇ ಕುಮಾರಸ್ವಾಮಿ ಅವರ ಜೊತೆ ಮಾತಕತೆ ನಡೆಸಿದ್ದು, ಅವರು ಬೆಂಗಳೂರಿಗೆ ಮರಳಿದ ನಂತರ ಚಿತ್ರಣ ಸ್ಪಷ್ಟವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ಟಿಕೆಟ್ ವಂಚಿತ ಮಾಜಿ ಸಚಿವ ಬಿ.ಎ. ಜೀವಿಜಯ ಅವರ ನಿಲುವಿನ ಮೇಲೆ ಹರಪಳ್ಳಿ ರವೀಂದ್ರ ಅವರ ನಡೆ ಅವಲಂಬಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ೨೦೧೮ ಮತ್ತು ೨೦೧೩ರ ಚುನಾವಣೆಯಲ್ಲಿ ಬಿ.ಎ. ಜೀವಿಜಯ ಜೆಡಿಎಸ್‌ನಿಂದ ಸ್ಪರ್ಧಿಸಿ ಪಕ್ಷವನ್ನು ೨ನೇ ಸ್ಥಾನಕ್ಕೆ ಏರಿಸಿದ್ದರು. ೨೦೦೮ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾಗಲೂ ಪ್ರಬಲ ಪೈಪೊಟಿ ಕೊಟ್ಟು ೨ನೇ ಸ್ಥಾನದಲ್ಲಿದ್ದರು. ಹಾಗಾಗಿ ಜೀವಿಜಯ ಬೆಂಬಲಿಸಿದರೆ ಜೆಡಿಎಸ್‌ನಿಂದ ನಿಂತು ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಇರುವ ಹರಪಳ್ಳಿ ರವೀಂದ್ರ ಒಂದು ವೇಳೆ ತಾವು ಸೋತರೆ ಕಾಂಗ್ರೆಸ್‌ಗೂ ಸೋಲು ಕಾಣಿಸಿ ಸೇಡು ತೀರಿಸಿಕೊಳ್ಳಬಹುದು ಎನ್ನುವ ಯೋಚನೆಯಲ್ಲಿ ಇದ್ದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net