ಕೇಂದ್ರ ಸರ್ಕಾರ ವಿರುದ್ಧ ಜೆಸಿಟಿಯು ಪ್ರತಿಭಟನೆ

JCTU Protest in mysore
Published on

ಮೈಸೂರು: ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ ನಗರದ ಗಾಂಧಿ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಧರಣಿ ಹಾಗೂ ಬಹಿರಂಗ ಸಭೆ ನಡೆಯಿತು. ಕೇಂದ್ರ ಸರ್ಕಾರ ಕಾರ್ಮಿಕ, ರೈತ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂಬ ಆಕ್ರೋಶ ಸಭೆಯಲ್ಲಿ ವ್ಯಕ್ತವಾಯಿತು.

ದೇಶಕ್ಕೆ ಸ್ವಾತಂತ್ರೃ ದೊರೆತು ಏಳು ದಶಕಗಳು ಕಳೆದರೂ ಕಾರ್ಮಿಕರ ಮೇಲಿನ ಶೋಷಣೆ ನಿಂತಿಲ್ಲ. ಆಳುವ ಸರ್ಕಾರಗಳ ಕಾರ್ಮಿಕ ವಿರೋಧಿ, ಜನವಿರೋಧಿ ನೀತಿಗಳ ವಿರುದ್ಧ ನಿರಂತರ ಹೋರಾಟ ನಡೆಸಿದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ತಿದ್ದುಪಡಿ ಕಾಯ್ದೆ ಪ್ರಕಾರ ಕಾರ್ಮಿಕರು ಸಂಘಟಿರಾಗಲು ಅವಕಾಶ ಇಲ್ಲ. ಕೆಲಸದ ಅವಧಿಯನ್ನು 9 ರಿಂದ 12ಕ್ಕೆ ಏರಿಕೆ ಮಾಡಿರುವುದು ಹಾಗೂ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಮಾಡಿರುವುದು ಸರಿಯಲ್ಲ ಎಂದರು.

ಬೇಡಿಕೆಗಳು: ಕೆಲಸದ ಅವಧಿ ಏರಿಕೆ ಹಿಂಪಡೆಯಬೇಕು, ಕನಿಷ್ಠ ವೇತನವನ್ನು 31 ಸಾವಿರಕ್ಕೆ ಏರಿಸಬೇಕು, ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದು ಮಾಡಬೇಕು, ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು, ಕನಿಷ್ಠ 8 ಸಾವಿರ ಪಿಂಚಣಿ ನೀಡಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು, ಉದ್ಯೋಗ ಖಾತ್ರಿ ಯೋಜನೆಯ ದುಡಿಮೆಯ ದಿನಗಳನ್ನು 200ಕ್ಕೆ ಏರಿಕೆ ಮಾಡಬೇಕು, ಸ್ಕೀಮ್ ಕಾರ್ಮಿಕರಾದ ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಯಿತು.

ಸಭೆಯಲ್ಲಿ ಜೆಸಿಟಿಯು ಸಂಚಾಲಕ ಜಗನ್ನಾಥ್, ವಿವಿಧ ಸಂಘಟನೆಗಳ ಪ್ರಮುಖರಾದ ಎಚ್.ಆರ್.ಶೇಷಾದ್ರಿ, ಎಚ್.ಬಿ. ರಾಮಕೃಷ್ಣ, ಸೋಮರಾಜೇ ಅರಸ್, ದೇವದಾಸ್, ಜಯರಾಮ್, ಬಾಲಾಜಿರಾವ್, ಅಣ್ಣಪ್ಪ, ಬಸವಯ್ಯ, ಜಗನ್ನಾಥ್, ಚಂದ್ರಶೇಖರ ಮೇಟಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net