ಅಮೃತ ಮಹೋತ್ಸವ ಯಶಸ್ವಿಗೊಳಿಸಿ ; ಅಧಿಕಾರಿಗಳಿಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನಿರ್ದೇಶನ

13TMK_JCM_Meeting
Published on

ತುಮಕೂರು: ದೇಶದ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಮೃತ ಮಹೋತ್ಸವ ಆಯೋಜನೆ ಕುರಿತು ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾಂತಂತ್ರ್ಯ ದೊರೆತು 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಅಮೃತ ಮಹೋತ್ಸವದ ಅಂಗವಾಗಿ 75 ವಾರಗಳ ಕಾಲ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಕೇಂದ್ರ ಸರ್ಕಾರ ದೇಶದಾದ್ಯಂತ ಅಮೃತ ಮಹೋತ್ಸವ ಹಮ್ಮಿಕೊಂಡಿದ್ದು, ಇಲಾಖೆಗಳು ತಮ್ಮ ವ್ಯಾಪ್ತಿಯ ಕಾರ್ಯಕ್ರಮ ಅಮೃತ ಮಹೋತ್ಸವದ ಬ್ಯಾನರ್ ಅಡಿ ನಡೆಸಬೇಕು ಎಂದು ಸೂಚಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ತುಂಬುತ್ತಿರುವ ವಿಚಾರವನ್ನು ಜನ ಸಾಮಾನ್ಯರಿಗೆ ಸಾರುವುದು ಪ್ರಧಾನ ಮಂತ್ರಿಯವರ ಮೂಲ ಆಶಯವಾಗಿದೆ. ಸಾರ್ವಜನಿಕರಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದು ನಿರ್ದೇಶಿಸಿದರು.

ಕೃಷಿ ಇಲಾಖೆಯಿಂದ ಎಣ್ಣೆಕಾಳು ಬೆಳೆಗಳ ಬಗ್ಗೆ ಹಾಗೂ ತೋಟಗಾರಿಕೆ ಇಲಾಖೆಯಿಂದ ತೆಂಗು ಉತ್ಪನ್ನಗಳ ಬಗ್ಗೆ ಅಮೃತಮಹೋತ್ಸವ ಕಾರ್ಯಕ್ರಮದಡಿಯಲ್ಲಿಯೇ ಆಯೋಜಿಸಬೇಕು, ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಪ್ರತಿ ತಿಂಗಳು ಆರೋಗ್ಯ ಶಿಬಿರಗಳನ್ನು ನಡೆಸುವಂತೆ ಆರೋಗ್ಯ ಇಲಾಖೆಗೆ, ಶಾಲೆಗಳಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ನಡೆಸುವಂತೆ, ಮೀನು ಉದ್ಯಮದ ಬಗ್ಗೆ ಕಾರ್ಯಾಗಾರ ನಡೆಸುವಂತೆ ಮೀನುಗಾರಿಕೆ ಇಲಾಖೆಗೆ ಹಾಗೂ ಆಹಾರ ಧಾನ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆಹಾರ ಇಲಾಖೆಗೆ ಸೂಚಿಸಿದರು.

ಎಲ್ಲಿಯೂ ಬೋಗಸ್ ಬಿಲ್‌ಗಳಾಗದೆ ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು, ಯಾವುದೇ ಕಾರಣಕ್ಕೂ ಹಣ ವ್ಯಯವಾಗಬಾರದು, ಸಮುದಾಯದ ಕಾಮಗಾರಿಗಳಿಗೆ ಆದ್ಯತೆ ಕೊಡಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರಿಗೆ ನಿರ್ದೇಶಿಸಿದರು.

ಎಣ್ಣೆಕಾಳು ಬೆಳೆಗಳನ್ನು ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಎಣ್ಣೆ ಕಾಳುಗಳ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಅರಿವು ಮೂಡಿಸಿ ಪ್ರೋತ್ಸಾಹಿಸಬೇಕು. ಈ ಬಗ್ಗೆ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಅವರಿಗೆ ಸೂಚಿಸಿದರು.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಗೆ ಒಂದು ಉತ್ಪನ್ನವಾಗಿ ಆಯ್ಕೆಯಾಗಿರುವ ತೆಂಗು ಬೆಳೆಯ ಉತ್ಪನ್ನಗಳ ಕುರಿತು ಕಾರ್ಯಾಗಾರ ಆಯೋಜಿಸಬೇಕು. ತೆಂಗು ಪಾರ್ಕ್ ನಿರ್ಮಾಣಕ್ಕೆ ತುಮಕೂರು-ಶಿವಮೊಗ್ಗ ಹೆದ್ದಾರಿಯಲ್ಲಿ ಜಾಗ ಗುರುತಿಸಲು ಅಧಿಕಾರಿಗೆ ಸೂಚಿಸಲಾಗಿದೆ. ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net