ಗಾರ್ಮೆಂಟ್ಸ್‌ ನೌಕರರಿಗೆ ಲಸಿಕೆ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ ; ಜಿಲ್ಲಾಡಳಿತದಿಂದ ಸಹಕಾರದ ಭರವಸೆ

DSC_3059
Published on

ತುಮಕೂರು: ಗಾಮೆರ್ಂಟ್ಸ್‌ಗಳಲ್ಲಿ ಕೆಲಸ ವಾಡುವ ನೌಕರರಿಗೆ ಸಂಸ್ಥೆ ವಾಲೀಕರೇ ಲಸಿಕೆ ನೀಡಲು ವ್ಯವಸ್ಥೆ ವಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಗಾಮೆರ್ಂಟ್ಸ್ ಮಾಲೀಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕೆ ಮತ್ತು ಗಾಮೆರ್ಂಟ್ಸ್ ಮಾಲೀಕರೇ ನೌಕರರಿಗೆ ಲಸಿಕೆ ಹಾಕಿಸಲು ಮುತುವರ್ಜಿ ವಹಿಸಬೇಕು. ಇದಕ್ಕೆ ಜಿಲ್ಲಾಡಳಿತದ ಸಹಕಾರ ಇರುತ್ತದೆ ಎಂದರು.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮುಂಚೂಣಿ ಕಾರ್ಯಕರ್ತರಾದ ಅಂಗವಿಕಲರು, ಚಿತಾಗಾರ, ನ್ಯಾಯಾಂಗ, ಬೀದಿ ಬದಿ ವ್ಯಾಪಾರಿಗಳು, ಆಸ್ಪತ್ರೆಯ ಸಿಬ್ಬಂದಿ, ಕೋವಿಡ್ ನಿಯೋಜಿತ ಶಿಕ್ಷಕರು, ವೃದ್ಧರ ರಕ್ಷಣೆಗೆ ನಿಂತವರು ಸೇರಿ ಇನ್ನಿರ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 50 ಸಾವಿರ ಜನರು ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಅವರಿಗೆ ಸೋಂಕು ಉಲ್ಬಣವಾಗದ ರೀತಿ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಮಾಲೀಕರೇ ಲಸಿಕೆ ಖರೀದಿಸಿ ನೌಕರರಿಗೆ ನೀಡುವ ವ್ಯವಸ್ಥೆ ಮಾಡುವುದು ಉತ್ತಮವಾದ ಕೆಲಸ. ಇಲ್ಲವಾದಲ್ಲಿ ಸೋಂಕು ನಿಯಂತ್ರಣ ಕಷ್ಟ ಎಂದರು.

ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಭಾಗದ ಗಾಮೆರ್ಂಟ್ಸ್ ನೌಕರರು ಗ್ರಾಮೀಣ ಪ್ರದೇಶದವರಾಗಿದ್ದಾರೆ, ಈ ನೌಕರರನ್ನು ಕೋವಿಡ್ ವಾರ್ಗಸೂಚಿ ನಿಯಮಗಳನ್ನು ಪಾಲಿಸದೆ ಆಟೋ ಅಥವಾ ಟೆಂಪೋಗಳಲ್ಲಿ ಕೆಲಸಕ್ಕೆ ಕರೆದೊಯ್ಯಲಾಗುತ್ತಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಕೆ.ವಂಶಿಕೃಷ್ಣಗೆ ಸೂಚಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಮುಂಚೂಣಿ ಕಾರ್ಯಕರ್ತರಿಗೆ ಜಿಲ್ಲೆಗೆ 12 ಲಕ್ಷ ಲಸಿಕೆ ಅವಶ್ಯಕತೆ ಇದೆ, ಈಗ ದಿನಕ್ಕೆ ಮೂರು ಸಾವಿರ ಲಸಿಕೆ ಬರುತ್ತಿದೆ. ಹಾಗಾಗಿ ಕೈಗಾರಿಕೆಗಳ ವಾಲೀಕರೇ ಲಸಿಕೆ ಖರೀದಿಸಿ ನೌಕರರಿಗೆ ನೀಡುವ ವ್ಯವಸ್ಥೆ ವಾಡಬೇಕು ಎಂದು ಮನವಿ ಮಾಡಿದರು. ಕರೊನಾ ನಿಯಂತ್ರಣ ಮತ್ತು ಲಸಿಕೆ ಕುರಿತ ಸಭೆ ನಂತರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಲಸಿಕೆ ವಿತರಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕೋವಿಡ್ ಪರೀಕ್ಷೆಗಳ ಪ್ರವಾಣ ಹೆಚ್ಚಿಸುವಂತೆ ಸೂಚಿಸಿದರು.

ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪಾಟಿಸಿಟಿವಿಟಿ ಶೇಕಡವಾರು ಪ್ರವಾಣ ಕಡಿಮೆಯಾಗುತ್ತಿದೆ, ಮತ್ತಷ್ಟು ಇಳಿಸಲು ಕೋವಿಡ್ ಪರೀಕ್ಷೆಗಳನ್ನು ಹೆಚ್ಚುಗೊಳಿಸಬೇಕು. ತಾಲೂಕು ಮತ್ತು ಪಿಎಚ್‌ಸಿಗಳಲ್ಲಿ ದೂರುಗಳು ಬಾರದ ರೀತಿಯಲ್ಲಿ ಸಮರ್ಪಕ ಲಸಿಕಾ ವಿತರಣೆಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿರುವ ಕೋವಿಡ್ ಸೆಂಟರ್ ನಿರ್ವಹಣೆ, ಆಮ್ಲಜನಕ ಬೆಡ್, ಐಸಿಯು ಬೆಡ್, ಸೋಂಕಿತರಿಗೆ ನೀಡುವ ಔಷಧದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ಬಾಬು ಮಾತನಾಡಿ, ವರದಿಯಾದ 12 ಬ್ಲ್ಯಾಕ್ ಫಂಗಸ್ ಪ್ರಕರಣಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ, ಖಾಸಗಿ ಹಾಗೂ ಇಎನ್‌ಟಿ ವೈದ್ಯರು ಅವಶ್ಯಕತೆ ಇರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆಗೊಳಪಡಿಸುತ್ತಿದ್ದಾರೆ ಎಂದು ಸಚಿವರಿಗೆ ಮಾಹಿತಿ ಒದಗಿಸಿದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಪಂ ಸಿಇಇಒ ಡಾ.ಕೆ.ವಿದ್ಯಾಕುವಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಡಾ.ಕೇಶವರಾಜ್, ಡಾ.ಸನತ್ ಕುಮಾರ್ ಇದ್ದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಕ್ಕಳ ಚಿಕಿತ್ಸಾ ವಾರ್ಡ್ ಸ್ಥಾಪಿಸಬೇಕು, ಇದರಿಂದ ಮಕ್ಕಳ ಪೌಷ್ಟಿಕತೆ ಗುಣಮಟ್ಟ ಕಾಪಾಡಲು ಅನುಕೂಲವಾಗುತ್ತದೆ. ಮುಂಗಾರು ಚುರುಕುಗೊಂಡಿದ್ದು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಸೇರಿ ಕೃಷಿ ಪರಿಕರಗಳ ಅಂಗಡಿಗಳನ್ನು ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿ ಮಳಿಗೆ ತರೆಯಲಾಗುವುದು. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net