ಮಂತ್ರಿ ಬದಲಾವಣೆಗೆ ತಂತ್ರ ; ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ ಗುಸುಗುಸು!

02TMK_Dist_INcharg_JCM
Published on

ತುಮಕೂರು: ಹಿರಿಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೈತಪ್ಪಿಸುವ ಹುನ್ನಾರ ನಡೆಯುತ್ತಿದೆ ಎಂಬ ಗುಸುಗುಸು ಕೇಳಲಾರಂಭಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಜೆಸಿಎಂ ಬದಲಾವಣೆ ವಿರೋಧಿಸಿ ಆಂದೋಲನ ನಡೆಯುತ್ತಿದ್ದು, ಜಿಲ್ಲೆಯೆಲ್ಲೆಡೆ ಸಮಗ್ರ ನೀರಾವರಿ ಯೋಜನೆಗೆ ಶ್ರಮಿಸುತ್ತಿರುವ ಮಾಧುಸ್ವಾಮಿ ಬದಲಾಯಿಸಿದರೆ ಸರ್ಕಾರದ ವಿರುದ್ಧ ಚಳವಳಿ ನಡೆಸಲಾಗುವುದು ಎಂದು ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಉಪಚುನಾವಣೆ ನಂತರ ನಡೆಯುವ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.

ರೈತ ಧ್ವನಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಅದರ ಸಾರಾಂಶ ಇಂತಿದೆ. ಆತ್ಮೀಯರೇ, ಇತ್ತೀಚೆಗೆ ತುಮಕೂರು ಜಿಲ್ಲೆಯ ರೈತರ ಬದುಕಿನಲ್ಲಿ ಸಣ್ಣ ಆಶಾಕಿರಣವೊಂದು ಮೂಡುತ್ತಿತ್ತು, ಹೇಮಾವತಿ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ನೀರಾವರಿ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದ್ದರೂ, ಜಿಲ್ಲೆಯ ಬಹುತೇಕ ಹಳ್ಳಿಗಳು ನೀರಾವರಿ ಸೌಕರ್ಯದಿಂದ ವಂಚಿತವಾಗಿದ್ದು ರೈತರ ಬದುಕು ಕಷ್ಟಕರವಾಗಿದೆ ಎಂದು ಎಚ್ಚರಿಕೆಯೊಂದಿಗೆ ವಿಷಯ ಮಂಡಿಸಲಾಗಿದೆ.

ಇದನ್ನು ಮನಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಮಾವತಿ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆಗಳ ಜತೆಗೆ ಬೆಂಗಳೂರಿನ ಕೊಳಚೆ ನೀರು ಶುದ್ಧೀಕರಿಸಿ ಗೂಳೂರು ಹೋಬಳಿ ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ಜಿಲ್ಲೆಯ ಎಲ್ಲ ಶಾಸಕರ ಬೆಂಬಲದೊಂದಿಗೆ ಅನುಷ್ಠಾನ ಗೊಳಿಸಲು ಎಲ್ಲ ರೀತಿಯ ತಯಾರಿ ನಡೆಸಿ, ರೈತರ ಮನದಲ್ಲಿ ಆಶಾಭಾವನೆ ಮೂಡಿಸಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಚರ್ಚಿತವಾಗುತ್ತಿರುವ ಸುದ್ದಿಯೊಂದು ತುಮಕೂರು ರೈತರಲ್ಲಿ ಆತಂಕ ಮೂಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವರೆಂಬ ಮಾತುಗಳು ಕೇಳಿಬರುತ್ತಿವೆ, ಇದರಿಂದಾಗಿ ಜಿಲ್ಲೆಯ ರೈತರ ಮೊಗದಲ್ಲಿ ಮೂಡಿದ್ದ ಕಿರುನಗೆಯೊಂದು ಕಾಣೆಯಾಗುವ ಕ್ಷಣ ಬಂದಿದೆ, ರೈತರ ಹಿತದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡದಂತೆ ಸಿಎಂಗೆ ಒತ್ತಾಯ ಮಾಡಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ರಾಜಕೀಯ ಬೆರೆಸದೆ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಲಾಗಿದೆ.

ಈಗ ಅವರನ್ನು ಉಳಿಸಿಕೊಳ್ಳಲು ಹೋರಾಟ ಮಾಡದಿದ್ದರೆ ರೈತರ ಬದುಕಿನಲ್ಲಿ ಮೂಡಿರುವ ಆಶಾಕಿರಣವೊಂದು ಕಾಣೆಯಾಗಿ, ರೈತರ ಬದುಕು ಮೂರಾಬಟ್ಟೆಯಾಗಲಿದೆ. ಏಳಿ ಎದ್ದೇಳಿ, ಎಚ್ಚರಗೊಳ್ಳಿ, ಹೋರಾಟ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದು ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ.

ಜಿಲ್ಲಾ ಉಸ್ತುವಾರಿ, ಗಣಿಧೂಳು: ಕೆಆರ್‌ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ‘ಚಿಕ್ಕನಾಯಕನಹಳ್ಳಿ ಅಭಿವೃದ್ಧಿ ಗ್ರೂಪ್’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪ್ರತಿಕ್ರಿಯಿಸಿ ‘ಜೆ.ಸಿ.ಮಾಧುಸ್ವಾಮಿ ಅವರಿಂದ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕಬಳಿಸಿ ಖುರ್ಚಿಯಲ್ಲಿ ಕೂರಲು ಟವಲ್ ಹಾಕಿರುವವರು ತಮ್ಮ ಮೇಲಿರುವ ಗಣಿಧೂಳಿನಿಂದ ಹೊರಬರಲು ಕಡತಗಳನ್ನೇನಾದರೂ ಸರಿಪಡಿಸಿಕೊಳ್ಳುವ ಹುನ್ನಾರಗಳ ತಂತ್ರದ ಭಾಗವಾಗಿ ಇಲ್ಲಿಗೆ ಬರುತ್ತಿರಬಹುದು?’ ಎಂದು ಮಾರ್ಮಿಕವಾದ ಕಮೆಂಟ್ ಹಾಕಿರುವುದು ವಿವಿಧ ಚರ್ಚೆಗೆ ದಾರಿ ಒದಗಿಸಿದೆ. ಈ ಹಿಂದೆ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಿರುವವರು, ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವವರೇ ತುಮಕೂರು ಜಿಲ್ಲಾ ಉಸ್ತುವಾರಿ ಖಾತೆ ಮೇಲೆ ಕಣ್ಣು ಹಾಕಿದ್ದಾರೆ ಎನ್ನಲಾಗಿದೆ. ಇವರಿಗೆ ಜಿಲ್ಲೆಯ ಕೆಲವು ಬಿಜೆಪಿ ಮುಂಚೂಣಿ ನಾಯಕರ ಕುಮ್ಮಕ್ಕು ಇದೆ ಎನ್ನಲಾಗಿದೆ ಆದರೆ, ವಿರೋಧ ಪಕ್ಷಗಳ ಶಾಸಕರು, ಜಿಲ್ಲೆಯ ಜನರು ಮಾಧುಸ್ವಾಮಿ ಅವರ ಬಗ್ಗೆ ಒಲವು ಹೊಂದಿದ್ದಾರೆ.

ಮಂತ್ರಿಯಾಗಿ ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ಹರಿಸುವುದು ನನ್ನ ಕನಸು, ಈ ಕಾಯಕವನ್ನಷ್ಟೇ ನಾನು ಮಾಡುತಿದ್ದೇನೆ, ಕೇವಲ ಚಿಕ್ಕನಾಯಕನಹಳ್ಳಿ ಮಾತ್ರವಲ್ಲ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಖುದ್ದು ಭೇಟಿ ನೀಡಿ ಯೋಜನೆ ರೂಪಿಸಲಾಗಿದೆ. ಎಲ್ಲ ಶಾಸಕರೂ ನನ್ನ ಮೇಲೆ ನಂಬಿಕೆಯಿಟ್ಟು ಸಹಕಾರ ನೀಡಿದ್ದಾರೆ. ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಸಿದರಷ್ಟೇ ರೈತರ ಬದುಕು ಹಸನಾಗುತ್ತದೆ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net