ತೆಂಗು ಅಭಿವೃದ್ಧಿಯಿಂದ ಆದಾಯ ; ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಮಾಹಿತಿ ; ಉತ್ಪನ್ನಗಳ ತಯಾರಿಕೆಗೆ ತರಬೇತಿ

06 c n halli Shettikere photo 1 - Copy
Published on

ಚಿಕ್ಕನಾಯಕನಹಳ್ಳಿ: ‘ಒಂದು ಜಿಲ್ಲೆಗೆ ಒಂದು ಬೆಳೆ’ ಯೋಜನೆಯಡಿ ಜಿಲ್ಲೆಯಲ್ಲಿ ತೆಂಗಿನ ಬೆಳೆ ಹಾಗೂ ಅದರ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಆದಾಯ ಬರುವಂತೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತಾಲೂಕಿನ ಶೆಟ್ಟಿಕೆರೆಯಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕರುಗಳ ಪ್ರದರ್ಶನ ಮತ್ತು ಹಾಲು ಕರೆಯುವ ತಾಲೂಕುಮಟ್ಟದ ಸ್ಪರ್ಧೆಯ ಸಮಾರೋಪದಲ್ಲಿ ಮಾತನಾಡಿದರು.

ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಅನುಕೂಲವಾಗುವಂತೆ ತೆಂಗು ಬೆಳೆ ಆಯ್ಕೆ ಮಾಡಲಾಗಿದ್ದು, ಕೃಷಿ, ತೋಟಗಾರಿಕೆ ಇಲಾಖೆಯಿಂದ ಇತರ ಉತ್ಪನ್ನಗಳ ತಯಾರಿಕೆ ಮತ್ತು ಅದರ ಮಾರಕಟ್ಟೆ ಬಗ್ಗೆ ತಿಳಿಸುವಂತಹ ಕೆಲಸ ಮಾಡಲಾಗುವುದು, ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಖರ್ಚು ಕಡಿಮೆ ಆದಾಯ ಹೆಚ್ಚು ಬರುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದರು.

ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ. ಹಾಗಾಗಿ ರೈತರು ಹಸು ಹಾಗೂ ಕರುಗಳನ್ನು ಆರೋಗ್ಯದಿಂದ ನೋಡಿಕೊಳ್ಳಿ ಎಂದು ತುಮುಲ್ ಅಧ್ಯಕ್ಷ ಮಹಾಲಿಂಗಪ್ಪ ತಿಳಿಸಿದರು.

ನಮ್ಮಲ್ಲಿ ಉತ್ಪಾದನೆಯಾಗುವ ಹಾಲಿಗೆ ಹೊರರಾಜ್ಯದ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸುವಂತೆ ತುಮುಲ್ ನಿರ್ದೇಶಕ ಹಳೆಮನೆ ಶಿವನಂಜಪ್ಪ, ಸಚಿವರಲ್ಲಿ ಮನವಿ ಮಾಡಿದರು. ಯಾವ ಕಾಲದಲ್ಲಿ ಯಾವ ಲಸಿಕೆ ಹಾಕಿಸುವುದು, ಚಿಕಿತ್ಸೆ ಹಾಗೂ ರಕ್ಷಣೆ, ಹಸುಗಳ ಸಾಕಣೆ ಕುರಿತು ಪಶು ಪಾಲನೆ ಇಲಾಖೆಯಿಂದ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರೆ.ಮ.ನಾಗಭೂಷಣ ತಿಳಿಸಿದರು.

ಸ್ಪರ್ಧೆಯ ವಿಜೇತರು: ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಳಗ್ಗೆ ಹಾಗೂ ಸಂಜೆ 33 ಲೀಟರ್ ಹಾಲು ಕರೆದ ರೈತ ಮಾದಿಹಳ್ಳಿ ಮಂಜುನಾಥ್ ಪ್ರಥಮ, ಅಗಸರಹಳ್ಳಿ ಲಿಂಗರಾಜು 32.50 ಲೀಟರ್ ಹಾಲು ಕರೆಯುವ ಮೂಲಕ ದ್ವಿತಿಯ, 31.36ಲೀಟರ್ ಕರೆದ ರಾಜಯ್ಯನಪಾಳ್ಯದ ಕಿರಣ್‌ಕುಮಾರ್ ಮೂರನೇ ಸ್ಥಾನ ಪಡೆದರು. 1ರಿಂದ 3ತಿಂಗಳ ಕರು ವಿಭಾಗದಲ್ಲಿ ಮಾಕುವಳ್ಳಿಯ ಶಶಿಧರ್ ಅವರ ಕರುವ ಪ್ರಥಮ, ಹಾಲುಗೊಣದ ಪುನೀತ್ ಅವರ ಕರು ದ್ವಿತೀಯ, ಸಿದ್ದರಾಮನಗರದ ಗಂಗಾಧರಯ್ಯ ಅವರ ಕರು ತೃತೀಯ ಬಹುಮಾನ ಪಡೆಯಿತು.

3ರಿಂದ 6 ತಿಂಗಳ ಕರು ವಿಭಾಗದಲ್ಲಿ ರಾಜಯ್ಯನಪಾಳ್ಯದ ರಘುರಾಜ್‌ಅರಸ್ ಪ್ರಥಮ, ಹೆಸರಹಳ್ಳಿ ಮಂಜುನಾಥ್ ದ್ವಿತೀಯ, ಕೊಡಲಾಗರದ ತೃತೀಯ ಸ್ಥಾನ ಪಡೆದರು. 6ರಿಂದ 9ತಿಂಗಳ ಕರು ವಿಭಾಗದಲ್ಲಿ ಮಾದಿಹಳ್ಳಿ ಮಂಜುನಾಥ್ ಪ್ರಥಮ, ಕುಪ್ಪೂರು ಪ್ರಕಾಶ್ ದ್ವಿತೀಯ, ಹೊಸಪಾಳ್ಯದ ರಾಜಣ್ಣ ತೃತೀಯ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net