

ತುಮಕೂರು: ಜಿಲ್ಲೆಯಲ್ಲಿ ರೈತ ಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ, ಈ ಬಗ್ಗೆ ಸಾಕಷ್ಟು ಸಭೆ ನಡೆಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರಿಸಿದರು.
ಸಿದ್ಧಗಂಗಾ ಮಠದ ವಸ್ತುಪ್ರದರ್ಶನದ ಆವರಣದಲ್ಲಿ ಸೋಮವಾರ ಆರಂಭವಾದ ‘ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ಜಿಪಂ ಹಾಗೂ ಜಿಲ್ಲಾಡಳಿತ ಹೆಚ್ಚು ಆಸಕ್ತಿ ವಹಿಸಿ ವಸ್ತು ಪ್ರದರ್ಶನದ ನೈಜ ಉದ್ದೇಶ ಸಕಾರ ಮಾಡಬೇಕು ಎಂದರು.
ವಸ್ತು ಪ್ರದರ್ಶನಗಳು ರೈತರಿಗೆ ಅಗತ್ಯ ಮಾಹಿತಿ ನೀಡುವಂತಿರಬೇಕು, ಸುಮ್ಮನೆ ಜಾತ್ರೆಗಳಂತೆ ನೋಡಿಕೊಂಡು ಹೋದರೆ ಪ್ರಯೋಜನವಿಲ್ಲ, ಕೃಷಿ, ಕೈಗಾರಿಕೆ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಪ್ರಚಾರ ಮಾಡಲು ಇರುವ ಅವಕಾಶ ಬಳಸಿಕೊಳ್ಳಬೇಕು ಎಂದರು.
ಹಸಿರು ಕ್ರಾಂತಿಯ ನಂತರ ದೇಶದಲ್ಲಿ ರೈತರು ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡ ತಾಂತ್ರಿಕತೆ ಕಾರಣಕ್ಕೆ ಇಂದು ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದೆ. ಪ್ರಸ್ತುತ ದೇಶದಲ್ಲಿ ಆಹಾರಕ್ಕೆ ಸಮಸ್ಯೆಯಿಲ್ಲ, ಹಸಿರು ಕ್ರಾಂತಿ ಅಳವಡಿಸಿಕೊಂಡ ಭಾರತೀಯರು ಜಾಗೃತಿ ಮೂಡಿಸಿದರೆ ಬೇಗ ಕಲಿಯುತ್ತಾರೆ ಎಂಬುದು ದೃಢವಾಗಿದೆ ಎಂದರು.
ಅನ್ನದಾತ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳುವ ಜತೆಗೆ ಸ್ವಾವಲಂಬಿಯಾಗಬೇಕು, ಗ್ರಾಮೀಣ ಬದುಕು ಸುಸ್ಥಿರವಾದರೆ ನಗರಕ್ಕೆ ವಲಸೆ ಕಡಿಮೆಯಾಗುತ್ತದೆ, ಸರ್ಕಾರದ ಮೇಲೆ ಹೊರೆಯೂ ಕಡಿಮೆಯಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡಿದ್ದರೆ ಗ್ರಾಮೀಣ ಶಾಲೆಗಳು ಮುಚ್ಚುತ್ತಿರಲಿಲ್ಲ, ಶಿಕ್ಷಣದಂತೆ ಕೃಷಿಯೂ ಕೇಂದ್ರೀಕರಣವಾದರೆ ಅನಾಹುತ ಸಂಭವಿಸುತ್ತದೆ ಎಂದು ಎಚ್ಚರಿಸಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸುಮಾರು ವರ್ಷಗಳಿಂದ ಈ ವಸ್ತು ಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿದೆ. ಕೃಷಿ, ಅರಣ್ಯ, ಮೀನುಗಾರಿಕೆ ಹೀಗೆ ಪ್ರತಿಯೊಂದು ಇಲಾಖೆಗಳು ವ್ಯವಸ್ಥಿತವಾಗಿ ಪ್ರದರ್ಶಿಸಲಾಗಿದ್ದು, ಜನರಿಗೆ ಬಹಳ ಉಪಯುಕ್ತ ಮಾಹಿತಿ ಕೊಡುವ ಕೆಲಸ ಮಾಡಲಾಗಿದೆ, ಜನರು ಎಲ್ಲ ಪ್ರದರ್ಶನಗಳನ್ನು ವೀಕ್ಷಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಎಂದರು. ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಪಂ ಅಧ್ಯಕ್ಷೆ ಎಂ.ಲತಾ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಮತ್ತಿತರರು ಇದ್ದರು.
ನಾವು ತೃಪ್ತಿಪಡುವಂತಹ ಕೆಲಸವನ್ನು ವಸ್ತುಪ್ರದರ್ಶನದಲ್ಲಿ ನಮ್ಮ ಇಲಾಖೆ ಮಾಡಿಲ್ಲ, ಕಳೆದ ವರ್ಷದಂತೆಯೇ ಈ ವರ್ಷ, ಈ ವರ್ಷದಂತೆಯೇ ಮುಂದಿನ ವರ್ಷವಿದ್ದರೆ ಏನು ಪ್ರಯೋಜನ. ಹೊಸತನದ ಕೊರತೆಯಿದೆ ಎಂಬುದು ಗಮನಕ್ಕೆ ಬಂದಿದೆ. ಮುಂದಿನ ವರ್ಷದ ವಸ್ತು ಪ್ರದರ್ಶನದ ಪೂರ್ವಭಾವಿ ಸಭೆ ನಾನೇ ನಡೆಸುತ್ತೇನೆ. ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ