

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಜೆ.ಸಿ.ಮಾಧುಸ್ವಾಮಿಗೆ ತಪ್ಪಿಸಿದ ಸಂಭ್ರಮದಲ್ಲಿ ಕೆಲವು ಸ್ವಪಕ್ಷೀಯ ಮುಖಂಡರು ತೇಲುತ್ತಿರುವಾಗ ಕಾಂಗ್ರೆಸ್, ಜೆಡಿಎಸ್ ಶಾಸಕರು ಜೆಸಿಎಂ ಪರ ಬ್ಯಾಟ್ ಬೀಸಿರುವುದು ಜಿಲ್ಲಾ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.
ಉಸ್ತುವಾರಿ ಸಚಿವ ಸ್ಥಾನಕ್ಕೆ ಆರಗ ಜ್ಞಾನೇಂದ್ರ ಅವರನ್ನು ನೇಮಿಸುತ್ತಿದ್ದಂತೆ ಕೆಲವು ಬಿಜೆಪಿ ಮುಖಂಡರು ತಾವೇ ಉಸ್ತುವಾರಿಗಳಂತೆ ಬೀಗಲು ಶುರುಮಾಡಿದ್ದಾರೆ. ಅವರ ಬೆಂಬಲಿಗರಂತೂ ಸಾಮಾಜಿಕ ಜಾಲತಾಣದಲ್ಲಿ ಆರಗ ಫೋಟೋ ಹಾಕಿಕೊಂಡು ಸಡಗರದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಸಕ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರೇ ‘ಜೆಸಿಎಂ ವ್ಯಕ್ತಿಗತ ಕೋಪಿಷ್ಠ, ಆದ್ರೆ ಸಮರ್ಥ ನಾಯಕ’ ಎಂದು ಹೇಳಿರುವುದು ಸ್ಥಳೀಯ ಬಿಜೆಪಿ ಮುಖಂಡರಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
ನೇರ, ನಿಷ್ಠ್ಠುರತೆ ಮುಳುವಾಯಿತೇ?: ಹೊರ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸುವ ಬಿಜೆಪಿ ವರಿಷ್ಠರ ಹೊಸ ಪ್ರಯೋಗ ಇದಾಗಿದ್ದರೂ ಮಾಧುಸ್ವಾಮಿ ನೇರ, ನಿಷ್ಠುರತೆಯೇ ಉಸ್ತುವಾರಿ ಸ್ಥಾನಕ್ಕೆ ಮುಳುವಾಯಿತೇ ಎಂಬುದು ಅವರ ಆಪ್ತರ, ಜೆಸಿಎಂ ಕಾರ್ಯವೈಖರಿಯನ್ನು ಬಲ್ಲ ಪ್ರತಿಪಕ್ಷಗಳ ಮುಖಂಡರ ಮುಕ್ತ ಅಭಿಪ್ರಾಯವಾಗಿದೆ. ಪಕ್ಷದೊಳಗಿನ ತಮ್ಮ ವಿರುದ್ಧದ ಪಿತೂರಿಯನ್ನು ಮಾಧುಸ್ವಾಮಿ ಅಷ್ಟೇ ಸಮಚಿತ್ತದಿಂದ ಸ್ವೀಕರಿಸಿದ್ದು, ತುಮಕೂರು ಉಸ್ತುವಾರಿ ವಾಪಸ್ ಪಡೆದಿರುವುದರ ಹಿಂದೆ ಯಾವುದೇ ರಾಜಕಾರಣವಿಲ್ಲ, ನನಗಿಂತ ಹಿರಿಯರಾದ ಕೆ.ಎಸ್.ಈಶ್ವರಪ್ಪ ಅವರಿಗೂ ಕೂಡ ಸ್ವಂತ ಜಿಲ್ಲೆ ನೀಡಿಲ್ಲ. ಜಿಲ್ಲೆಯ ಅಭಿವೃದ್ಧಿ ಮತ್ತು ವಾಸ್ತವತೆ ಗೊತ್ತಿಲ್ಲದೇ ಬರೀ ಪ್ರಗತಿ ಪರಿಶೀಲನೆ ಮಾಡಿಕೊಂಡಿರಲು ಸಾಧ್ಯವಿಲ್ಲವೆಂದು ಸೂಕ್ಷ್ಮ ಮನಸಿನಿಂದಲೇ ಸಿಎಂ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಮಧ್ಯೆ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡ ‘ಯಾವ ಮಾನದಂಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದಾರೆಂಬುದು ತಿಳಿಯದು. ಜಿಲ್ಲೆಯ ಸಮಗ್ರ ಚಿತ್ರಣ ಬಲ್ಲ ಸ್ಥಳೀಯರಿಗೆ ಉಸ್ತುವಾರಿ ಜವಾಬ್ದಾರಿ ನೀಡುವುದು ಸೂಕ್ತ. ಬೇರೆ ಜಿಲ್ಲೆಯ ಆರಗ ಜ್ಞಾನೇಂದ್ರ ಅವರಿಂದ ಅಭಿವೃದ್ಧಿ ನಿರೀಕ್ಷೆ ಹೇಗೆ ಸಾಧ್ಯ. ಈ ವಿಷಯದಲ್ಲಿ ಸಿಎಂ ಅವರದ್ದು ಉತ್ತಮ ನಡೆಯಲ್ಲ’ ಎಂದು ಹೇಳಿದ್ದಾರೆ.
ಜಿಲ್ಲೆಯನ್ನು ಪ್ರತಿನಿಧಿಸುವ ಸಂಪುಟ ದರ್ಜೆ ಸಚಿವರಿಗೆ ಜಿಲ್ಲೆಯ ಉಸ್ತುವಾರಿ ನೀಡದೆ ಇರುವುದು ಈ ಜಿಲ್ಲೆಗೆ ಮಾಡಿರುವ ವಂಚನೆ ಜತೆಗೆ ಜಿಲ್ಲೆಯ ಸಚಿವರು ಉಸ್ತುವಾರಿ ನಿರ್ವಹಿಸಲು ಅಸಮರ್ಥರೇ? ಎಂಬ ಚರ್ಚೆಯನ್ನು ಸಾರ್ವಜನಿಕ ವಲಯದಲ್ಲಿ ಸಿಎಂ ಹುಟ್ಟುಹಾಕಿದ್ದಾರೆ. ಒಂದುವೇಳೆ ಅವರ ಮೇಲೆ ವಿಶ್ವಾಸ ಇಲ್ಲದಿದ್ದರೆ ಸಂಪುಟದಿಂದಲೇ ಕೈಬಿಡಬೇಕಿತ್ತು. ಜಿಲ್ಲೆಯ ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಜಿಲ್ಲೆಯ ಸಚಿವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸುವಂತೆ ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಖಂಡ ರಮೇಶ್‌ಬಾಬು ಸಹ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಯಾವುದೇ ವರ್ಗಾವಣೆಗೆ, ಕೆಲಸಕ್ಕೆ ಲೆಟರ್‌ಹೆಡ್, ಶಿಫಾರಸು ಮಾಡದ ಕಾರಣ ಮಾಧುಸ್ವಾಮಿ ಅವರು ಸ್ವಪಕ್ಷೀಯರಿಗೆ ಅಪ್ರಿಯರೆನಿಸಿದ್ದಾರಾದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಅಚ್ಚುಮೆಚ್ಚಿನ ಸಚಿವರಾಗಿದ್ದಾರೆ.