

ಹುಳಿಯಾರು : ಚಿಕ್ಕನಾಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿಯ ಡಿಂಕನಹಳ್ಳಿ ಬಳಿ ಶೀಘ್ರದಲ್ಲೇ 400 ಕೋಟಿ ರೂಪಾಯಿ ವೆಚ್ಚದ ಪವರ್ ಸ್ಟೇಷನ್ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರಿನಲ್ಲಿ ಮಂಗಳವಾರ ಬೆಸ್ಕಾಂ ಕೊಠಡಿಗಳ ಉದ್ಘಾಟನೆ ಹಾಗೂ ಜನಸ್ನೇಹಿ ವಿದ್ಯುತ್ ಸೇಚೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಂಕನಹಳ್ಳಿ ಸ್ಟೇಷನ್ ಇಡೀ ರಾಜ್ಯದಲ್ಲೇ ಉತೃಷ್ಟವಾದ ಸ್ಟೇಷನ್ ಆಗಲಿದೆ. ಇದು ಆರಂಭವಾದಾಗ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಕೊಡಬಹುದು. ಅಲ್ಲದೆ ಇಡೀ ದಕ್ಷಿಣ ಕರ್ನಾಟಕದ ಭಾಗವನ್ನು ಇಲ್ಲಿಂದಲೇ ವಿದ್ಯುತ್ ಬ್ಯಾಲೆನ್ಸ್ ಮಾಡಬಹುದು, ಕಾಮಗಾರಿ ಆರಂಭವಾಗಬೇಕಿತ್ತಾದರೂ ಸಣ್ಣಪುಟ್ಟ ತಕರಾರಿನಿಂದ ತೊಡಕಾಗಿತ್ತು. ಈಗ 9 ಕೋಟಿ ರೂ. ನೀಡಿ ಭೂಸ್ವಾದೀನ ಮಾಡಿಕೊಳ್ಳಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇಲ್ಲ. ಆದರೆ ವಿತರಣೆಯಲ್ಲಿ ಸಮಸ್ಯೆಯಿದೆ. ವಿತರಣಾ ಜಾಲ ಸರಿಯಿಲ್ಲದಿದ್ದರೆ ಎಷ್ಟೇ ವಿದ್ಯುತ್ ಇದ್ದರೂ ವ್ಯರ್ಥವಾಗುತ್ತದೆ ಎಂದು ಭಾವಿಸಿ ಹೆಚ್ಚು ವಿತರಣಾ ಸೆಂಟರ್‌ಗಳನ್ನು ನಿರ್ಮಿಸಲು ಒತ್ತು ನೀಡಲಾಗುತ್ತಿದೆ ಎಂದರಲ್ಲದೆ, ರೈತರಿಗೆ ನಿತ್ಯ 7 ಗಂಟೆ ವಿದ್ಯುತ್ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಸಾಮರ್ಥ್ಯ ಇರುವ ಕಡೆ ಬೆಳಗ್ಗೆ 4 ಗಂಟೆ ರಾತ್ರಿ 3 ಗಂಟೆ ಕೊಡುತ್ತಿದ್ದಾರೆ. ಆದರೆ ಚಿಕ್ಕನಾಯಕನಹಳ್ಳಿಯಲ್ಲಿ ಸ್ಟೇಷನ್‌ಗಳ ಕೊರತೆಯಿಂದ ಇದು ಸಾಧ್ಯವಾಗಿರಲಿಲ್ಲ ಎಂದರು.
ಎರಡು ಸಬ್ ಡಿವಿಜನ್ ಆಗಲು ಅರ್ಹವಾದ ತಾಲೂಕು ಚಿಕ್ಕನಾಯಕನಹಳ್ಳಿಯಾಗಿದೆ. ಹುಳಿಯಾರು ಹೋಬಳಿಗೆ ಚಿಕ್ಕನಾಯಕನಹಳ್ಳಿ ತರಹದ ಸಬ್‌ಡಿವಿಜನ್ ಕಚೇರಿ ಇದೆ. ಇದರಿಂದ ಫೀಡರ್ ಮತ್ತು ಒಎನ್‌ಡಂಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ತಾಲೂಕಿನಲ್ಲಿರುವ ಏಳೆಂಟು ಎಂವಿಎಸ್‌ಎಸ್‌ನಲ್ಲಿ ಹುಳಿಯಾರಿಗೆ ಹತ್ತಿರದಲ್ಲಿ ಮೂರ‌್ನಾಲ್ಕು ಇದ್ದು ಹೊಸದಾಗಿ ಇನ್ನೂ ಮೂರ‌್ನಾಲ್ಕು ಎಂವಿಎಸ್‌ಎಸ್ ಈ ಭಾಗದಲ್ಲಿ ಆಗುವುದರಿಂದ ಹುಳಿಯಾರಿಗೆ ಸಬ್‌ಡಿವಿಜನ್ ಆಗಬೇಕಿದ್ದು ಅಗತ್ಯತೆಯ ಬಗ್ಗೆ ಬೆಸ್ಕಾಂ ಗಮನಕ್ಕೆ ತರುವುದಾಗಿ ಮಾಧುಸ್ವಾಮಿ ತಿಳಿಸಿದರು.
ತುಮಕೂರು ಕೆಪಿಟಿಸಿಎಲ್‌ನ ಮುಖ್ಯ ಇಂಜಿನಿಯರ್ ಸಿ.ಆದಿನಾರಾಯಣ, ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೆ.ಎಲ್.ಲೋಕೇಶ್, ಕೆಪಿಟಿಸಿಎಲ್‌ನ ಅಧೀಕ್ಷಕ ಇಂಜಿನಿಯರ್ ಅಲ್ಲಾಭಕಾಷ್, ತಿಪಟೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಸೋಮಶೇಖರಗೌಡ, ಕೆಪಿಟಿಸಿಎಲ್ ನೌಕರರ ಸಂಘದ ಬೆಸ್ಕಾಂ ಉಪಾಧ್ಯಕ್ಷ ಲಿಂಗದೇವರು, ಪಪಂ ಅಧ್ಯಕ್ಷ ಕೆಎಂಎಲ್ ಕಿರಣ್, ಉಪಾಧ್ಯಕ್ಷೆ ಶ್ರುತಿ ಸನತ್ ಉಪಸ್ಥಿತರಿದ್ದರು.
ರಾಜ್ಯದಲ್ಲೇ ಹೆಚ್ಚು ಕೊಳವೆೆ ಬಾವಿ ಹೊಂದಿದ ಜಿಲ್ಲೆ : ಇಡೀ ರಾಜ್ಯದಲ್ಲಿ ಹೆಚ್ಚು ಪವರ್ ಸ್ಟೇಷನ್‌ಗಳಿರುವ ಜಿಲ್ಲೆ ತುಮಕೂರು. ಅಲ್ಲದೆ ಇಡೀ ರಾಜ್ಯದಲ್ಲೇ ಹೆಚ್ಚು ಕೊಳವೆಬಾವಿಗಳಿರುವ ಜಿಲ್ಲೆಯೂ ತುಮಕೂರು. ಎರಡನೇ ಜಿಲ್ಲೆ ಕೋಲಾರ ಆಗಿದೆ. ಗುಬ್ಬಿ ರಾಜ್ಯದಲ್ಲೇ ಹೆಚ್ಚು ಕೊಳವೆಬಾವಿಗಳಿರುವ ತಾಲೂಕಾಗಿದ್ದು, ಸರಿಸುಮಾರು 1 ಲಕ್ಷ ಕೊಳವೆಬಾವಿಗಳಿವೆ. ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆಯಲ್ಲಿ ಹದಿನೈದಿಪ್ಪತ್ತು ಸಾವಿರ ಕೊಳವೆಬಾವಿಗಳಿವೆ. ಹಾಗಾಗಿ ಜಿಲ್ಲೆಯಲ್ಲಿ ಎಂವಿಎಸ್‌ಎಸ್ ಆರಂಭಕ್ಕೆ ಹೆಚ್ಚು ಒತ್ತು ಕೊಡಬೇಕಿದೆ. ಈ ನಿಟ್ಟಿನಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ 5 ಎಂವಿಎಸ್‌ಎಸ್ ಮಂಜೂರಾಗಿದೆ. ಬುಕ್ಕಾಪಟ್ಟಣಕ್ಕೆ ಎರಡ್ಮೂರು ಎಂವಿಎಸ್‌ಎಸ್ ಮಂಜೂರು ಆಗುವುದರಲ್ಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ರೈತರಿಗೆ ಬೆಸ್ಕಾಂ ನೆರವು : ನೀರು ಮತ್ತು ವಿದ್ಯುತ್ ಇಂದು ಮನುಷ್ಯನ ಜೀವನಾಡಿಯಾಗಿವೆ. ಈ ನಿಟ್ಟಿನಲ್ಲಿ ಸಚಿವರು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ಎರಡಕ್ಕೂ ಹೆಚ್ಚು ಒತ್ತು ನೀಡಿರುವುದು ಅಭಿನಂದನಾರ್ಹ. ರೈತರಿಗೆ 24 ಗಂಟೆಯೊಳಗೆ ಟ್ರ್ರಾನ್ಸ್‌ಫಾರ್ಮರ್ ದುರಸ್ತಿ ಮಾಡಿಕೊಡುವ ಅಥವಾ ಹೊಸದಾಗಿ ಅಳವಡಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲೂ ರಿಪೇರಿ ಸೆಂಟರ್‌ಗಳನ್ನು ತೆರೆಯಲಾಗಿದೆ. ಅಲ್ಲದೆ ಐವತ್ತರಿಂದ ಅರವತ್ತು ಟ್ರ್ರಾನ್ಸ್‌ಫಾರ್ಮರ್ ಸ್ಟಾಕ್ ಇಟ್ಟುಕೊಳ್ಳುವ ಮೂಲಕ ರೈತರಿಗೆ ಬೆಸ್ಕಾಂ ನೆರವಾಗುತ್ತಿದೆೆ ಎಂದು ಕೆಪಿಟಿಎಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ತಿಳಿಸಿದರು.
ಬೆಳಕು ಯೋಜನೆಯಡಿ ಬಿಪಿಎಸ್ ಕಾರ್ಡ್ ಉಳ್ಳವರಿಗೆ ಉಚಿತವಾಗಿ ಕಂಬ ನೆಟ್ಟು, ವೈರ್ ಎಳೆದು ವಿದ್ಯುತ್ ಸಂಪರ್ಕ ಕೊಡಲಾಗುತ್ತದೆ. ಜನಸ್ನೇಹಿ ಕಾರ್ಯಕ್ರಮದಡಿ ಆನ್‌ಲೈನ್ ಮೂಲಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಿ ಸರ್ವಿಸ್ ಡಿಪಾಸಿಟ್ ಕಟ್ಟಿದರೆ 24 ಗಂಟೆಯೊಳಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಕೆ.ವಿ.ಗೋವಿಂದಪ್ಪ ಬೆಸ್ಕಾಂ ಚಿತ್ರದುರ್ಗದ ಮುಖ್ಯ ಇಂಜಿನಿಯರ್