ತುಮಕೂರು ಜಿಲ್ಲೆಯಲ್ಲಿ 5 ಪೊಲೀಸ್ ಠಾಣೆ ; ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ; ಕನ್ನಡ ಸಂಘದ ವೇದಿಕೆ ಬಳಿ ನಿರ್ಮಾಣಕ್ಕೆ ಭೂಮಿಪೂಜೆ

25HULIYAR1 (1)
Published on

ಚಿಕ್ಕನಾಯಕನಹಳ್ಳಿ : ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 5 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುವುದು. ಪ್ರತಿ ಠಾಣೆಗೆ 2 ಕೋಟಿ ರೂ. ಅನುದಾನ ಒದಗಿಸುತ್ತಿರುವುದಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಪಟ್ಟಣದ ಕನ್ನಡ ಸಂಘದ ವೇದಿಕೆ ಬಳಿ ಹೊಸ ಪೊಲೀಸ್ ಠಾಣೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವೃತ್ತ ನಿರೀಕ್ಷಕರ ಮತ್ತು ಸಬ್‌ಇನ್‌ಸ್ಪೆಕ್ಟರ್ ಕಚೇರಿಗಳು ಒಂದೇ ಕಟ್ಟಡದಲ್ಲಿ ಇರುವ ಕಾರಣ, ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ಮಾತ್ರ 2.50 ಕೋಟಿ ರೂ. ಅನುದಾನ ಒದಗಿಸಿರುವುದಾಗಿ ಸ್ಪಷ್ಟನೆ ನೀಡಿದರು.

2 ವರ್ಷಕ್ಕೆ ಅವಧಿ ಇಳಿಕೆ: ರಾಜ್ಯಾದ್ಯಂತ ಶಿಥಿಲಗೊಂಡಿರುವ 100 ಠಾಣೆಗಳನ್ನು ತೆರವುಗೊಳಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ವರ್ಷದಲ್ಲಿ ಠಾಣೆಗಳ ನಿರ್ಮಾಣಕ್ಕೆ ಗುರಿ ಹಾಕಿಕೊಂಡಿದ್ದೆವು. ಆದರೆ ಈಗ ಈ ಅವಧಿಯನ್ನು 2 ವರ್ಷಗಳಿಗೆ ಇಳಿಕೆ ಮಾಡಲಾಗಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರಿನಲ್ಲಿ ಹೊಸ ಠಾಣೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದರು.

ಬಂದಿಖಾನೆ, ಶೌಚಗೃಹ ವ್ಯವಸ್ಥೆ: ರಾಜ್ಯಾದ್ಯಂತ ಶಿಥಿಲಗೊಂಡಿರುವ 100 ಪೊಲೀಸ್ ಠಾಣೆಗಳಲ್ಲಿ ಬಂಧಿಖಾನೆ ಮತ್ತು ಶೌಚಗೃಹದ ವ್ಯವಸ್ಥೆ ಇರಲಿಲ್ಲ. ಆ ಕಟ್ಟಡಗಳನ್ನು ತೆರವುಗೊಳಿಸಿ ಮರುನಿರ್ಮಾಣ ಮಾಡಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪೊಲೀಸ್ ವಸತಿ ಕಾರ್ಪೋರೇಷನ್‌ನಿಂದ ನಿರ್ಮಾಣ: ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಶಹಾಪುರವಾಡ್ ಮಾತನಾಡಿ, ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರಿನಲ್ಲಿ ಇನ್ನು 11 ತಿಂಗಳಲ್ಲಿ ಹೊಸ ಠಾಣೆಗಳು ನಿರ್ಮಾಣಗೊಳ್ಳಲಿವೆ. ಪೊಲೀಸ್ ವಸತಿ ಕಾರ್ಪೋರೇಷನ್ ನಿರ್ಮಾಣ ಕಾರ್ಯದ ಜವಾಬ್ದಾರಿ ಹೊತ್ತಿದೆ. ಬಂದಿಖಾನೆ ನಿರ್ಮಾಣವಾಗಿ, ಎಲ್ಲ ಸೌಲಭ್ಯಗಳನ್ನು ಒಳಗೊಂಡಿದ್ದರೂ ಯಾರೊಬ್ಬರೂ ಅದರೊಳಗೆ ಹೋಗುವಂತೆ ಆಗದಿರಲಿ ಎಂದು ಹಾರೈಸುವುದಾಗಿ ತಿಳಿಸಿದರು.

ತಹಸೀಲ್ದಾರ್ ತೇಜಸ್ವಿನಿ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ, ಹಂದನಕೆರೆ, ಹುಳಿಯಾರಿನಲ್ಲಿ ನಾಡಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮಾಧುಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡರು.

ಪುರಸಭೆ ಅಧ್ಯಕ್ಷೆ ಪುಷ್ಪಾ ಮಾತನಾಡಿದರು. ಸಹಾಯಕ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ ಗೋಯಲ್, ಸಿಪಿಐ ವಿ. ನಿರ್ಮಲಾ, ಪುರಸಭೆ ಉಪಾಧ್ಯಕ್ಷೆ ಪೂರ್ಣಿಮಾ, ಮಾಜಿ ಉಪಾಧ್ಯಕ್ಷೆ ರೇಣುಕಮ್ಮ, ನಾಮನಿರ್ದೇಶಿತ ಸದಸ್ಯರಾದ ಮಿಲಿಟರಿ ಶಿವಣ್ಣ, ದೇವರಾಜ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಎಎಸ್‌ಐಗಳಾದ ರವೀಂದ್ರ, ವೆಂಕಟೇಶ್ ಇತರರು ಇದ್ದರು.

ಹುಳಿಯಾರು ಆಸ್ಪತ್ರೆ ಮೇಲ್ದರ್ಜೆಗೆ: ಹುಳಿಯಾರು ಆಸ್ಪತ್ರೆಯನ್ನು 50 ಹಾಸಿಗೆ ಸೌಲಭ್ಯವುಳ್ಳ ಸುಸಜ್ಜಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಈ ಸಂಬಂಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್ ಇಲ್ಲಿಗೆ ಭೇಟಿ ನೀಡಬೇಕಿತ್ತು. ಆದರೆ, ಹಾಲಿಯಿರುವ ಆಸ್ಪತ್ರೆಯನ್ನು ಹಾಗೂ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 50 ಹಾಸಿಗೆಗಳ ಆಸ್ಪತ್ರೆಗಾಗಿ ಸ್ಥಳವನ್ನು ಪರಿಶೀಲಿಸಬೇಕಿತ್ತು. ಆದರೆ ಕಾರ್ಯನಿಮಿತ್ತ ಅವರು ಇಲ್ಲಿಗೆ ಬಂದಿಲ್ಲ. ಇನ್ನು ಎರಡ್ಮೂರು ದಿಗಳಲ್ಲಿ ಅವರು ಬರುವುದಾಗಿ ಜೆ.ಸಿ. ಮಾಧುಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net