ಮದಲೂರು ಕೆರೆಗೆ ಶೀಘ್ರ ಹೇಮೆ ನೀರು ; ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ

11 GUBBI 1
Published on

ಬರಗೂರು : ಶಿರಾ ಕ್ಷೇತ್ರದ ಜನರ ಕುಡಿಯುವ ನೀರಿನ ಉದ್ದೇಶಕ್ಕೆ ಹೇಮಾವತಿ ಡ್ಯಾಂನಿಂದ 0.9 ಟಿಎಂಸಿ ನೀರು ನಿಗದಿಯಾಗಿದೆ. ಕಳೆದ ಹಲವು ದಿನಗಳಿಂದ 0.4 ಟಿಎಂಸಿ ನೀರು ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡಕೆರೆಗೆ ಹರಿಯುವುದರ ಜತೆಗೆ ಮಳೆಯೂ ಆಗಿದ್ದರಿಂದ 2 ಕೆರೆಗಳು ಭರ್ತಿಯಾಗಿವೆ. ಉಳಿಕೆ 0.5 ಟಿಎಂಸಿ ನೀರನ್ನು ಶೀಘ್ರವೇ ಮದಲೂರು ಕೆರೆಗೆ ಹರಿಸಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ರಂಗಾಪುರದಲ್ಲಿ ಸೋಮವಾರ ಗಡಿನಾಡು ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಆಯೋಜಿಸಿದ್ದ ಸೋಲಾರ್ ಶೀತಲೀಕರಣ ಘಟಕ ಉದ್ಘಾಟನೆ, ಕಟ್ಟಡ ಶಂಕುಸ್ಥಾಪನೆ ನರವೇರಿಸಿ ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮದಲೂರು ಕಾಲುವೆ ಕಾಮಗಾರಿಗೆ ಒಪ್ಪಿಗೆ ನೀಡಿರುವ ಪ್ರತಿಯನ್ನು ನೀರಿನ ಅಲೋಕೇಶನ್ ಎಂದು ಹೇಳಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಪಟ್ರವತನಹಳ್ಳಿಯಿಂದ ಕಳ್ಳಂಬೆಳ್ಳ ಕೆರೆಗೆ ನೀರು ಬರುವ ಮಾರ್ಗಮಧ್ಯೆ 13 ಬ್ಯಾರೇಜ್ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಶಿರಾ ತಲುಪುವುದು ಕಷ್ಟ ಸಾಧ್ಯವಾಗುತ್ತಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನೀರು ಹರಿಸುತ್ತಿದೆ ಎಂದರು.

ಸೋಲಾರ್ ಶಕ್ತಿಯಿಂದ ನಿರ್ಮಾಣವಾದ ಶೀತಲೀಕರಣ ಘಟಕ ಹಣ್ಣು ಬೆಳೆಗಾರರಿಗೆ ಹೆಚ್ಚು ಸಹಕಾರಿಯಾಗಿದ್ದು, ಸಣ್ಣ ಪುಟ್ಟ ರೈತರನ್ನು ಒಗ್ಗೂಡಿಸಿ ಉತ್ಪಾದಕರ ಕಂಪನಿಯಲ್ಲಿ ಸೇರಿಸಿಕೊಂಡು ಸರ್ಕಾರದ ಯೋಜನೆಗಳು ಸೌಲಭ್ಯಗಳು ಪ್ರತಿ ರೈತನಿಗೂ ತಲುಪುವಂತೆ ಮಾಡಬೇಕಿದೆ ಎಂದರು.

ಪ್ರತಿ ಬೆಳೆಗೆ ಉಪ ಉತ್ಪನ್ನ ತಯಾರಿಸುವ ಕೆಲಸವಾಗಲಿ :  ರೈತರು ಬೆಳೆಯುವ ಪ್ರತಿ ಬೆಳೆಗೂ ಉಪ ಉತ್ಪನ್ನಗಳ ತಯಾರು ಮಾಡುವ ಕೆಲಸಗಳು ವೈಜ್ಞಾನಿಕವಾಗಿ ಮಾಡಿದಾಗ ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

ಹೇರೂರಿನಲ್ಲಿ ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ಹಣ್ಣು ಮಾಗಿಸುವ ಘಟಕ ಮತ್ತು ಶೀತಲ ಘಟಕದ ಉದ್ಘಾಟನೆ ಹಾಗೂ ಹಣ್ಣು ತರಕಾರಿ ಮಾರಾಟದ ಮಳಿಗೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮತನಾಡಿದ ಅವರು, ಇಂತಹ ಘಟಕಗಳು ಮುಂದಿನ ದಿನದಲ್ಲಿ ಗ್ರಾಪಂ ಮಟ್ಟದಲ್ಲಿ ಇಂಥ ಘಟಕ ತೆರೆಯಲು ಸರ್ಕಾರ ಚಿಂತನೆ ನಡೆಸಿದ್ದು, ಘಟಕವನ್ನು ಖಾಸಗಿ ಅಥವಾ ಎನ್‌ಜಿಒ, ಎಫ್‌ಎಒಗಳ ಮೂಲಕವೂ ಮಾಡಲು ಚಿಂತೆನೆಯಿದ್ದು. ಸರ್ಕಾರದಿಂದ ಸ್ಸಬ್ಸಿಡಿ ನೀಡಲಾಗುತ್ತದೆ ಎಂದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಹಿತ ಕಾಪಾಡಲು ರೈತನ ಮನೆ ಬಾಗಿಲಿಗೆ ಅವರು ಬೆಳೆದ ಬೆಳೆಗಳನ್ನು ಸರ್ಕಾರವೇ ತೆಗೆದುಕೊಂಡು ಹೋಗುವ ಯೋಜನೆ ಮೋದಿ ಮಾಡಿದ್ದಾರೆ. ಆದರೆ ಕೆಲವರು ಇದನ್ನು ವಿರೋಧಿಸುತ್ತಿರುವುದು ಒಳ್ಳೆಯದಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಬೇಕು, ಸರ್ಕಾರವೇ ನೇರವಾಗಿ ಕೊಂಡುಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net