

ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನಲ್ಲಿ ಹಿರಿಯ ವಿದ್ಯಾರ್ಥಿಗಳು ಹಾಗೂ ಕ್ರೀಡಾಸಕ್ತರ ವಿರೋಧದ ನಡುವೆಯೂ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕೊಠಡಿಗಳ ಕಾಮಗಾರಿಗೆ ಭಾನುವಾರ ಸಚಿವ ಜೆ.ಸಿ.ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.
ಹುಳಿಯಾರು ಪಬ್ಲಿಕ್ ಸ್ಕೂಲ್‌ಗೆ ನೂತನವಾಗಿ 8 ಕೊಠಡಿಗಳ ನಿರ್ಮಾಣಕ್ಕೆ ನಬಾರ್ಡ್‌ನಿಂದ 2 ಕೋಟಿ ರೂಪಾಯಿ ಮಂಜೂರಾಗಿತ್ತು. ಇದರಲ್ಲಿ ನಾಲ್ಕು ಕೊಠಡಿಗಳನ್ನು ಹುಳಿಯಾರು-ಕೆಂಕೆರೆ ಮಧ್ಯದಲ್ಲಿರುವ ಪಿಯು ಕಾಲೇಜು ಆವರಣದಲ್ಲೂ, ನಾಲ್ಕು ಕೊಠಡಿಗಳನ್ನು ಹುಳಿಯಾರಿನ ಎಂಪಿಎಸ್ ಆವರಣದಲ್ಲೂ ನಿರ್ಮಿಸಲು ಭಾನುವಾರ ಭೂಮಿ ಪೂಜೆ ಏರ್ಪಡಿಸಲಾಗಿತ್ತು.
ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅಧಿಕಾರಿಗಳು ಹಾಗೂ ಬೆಂಬಲಿಗರೊಂದಿಗೆ ಹುಳಿಯಾರಿನಲ್ಲಿ ಕೊಠಡಿ ಕಾಮಗಾರಿಗೆ ಶಂಕುಸ್ಥಾಪನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು, ಪಟ್ಟಣದ ಕ್ರೀಡಾಸಕ್ತರು ಕೊಠಡಿ ನಿರ್ಮಿಸಿದರೆ ಆಟದ ಮೈದಾನಕ್ಕೆ ಅಡ್ಡಿಯಾಗಲಿದ್ದು, 8 ಕೊಠಡಿಗಳನ್ನೂ ಪಿಯು ಕಾಲೇಜು ಬಳಿ ನಿರ್ಮಿಸುವುದು ಒಳಿತು ಎಂದು ಮನವಿ ಮಾಡಿದರು.
ಹುಳಿಯಾರು ಪಟ್ಟಣದ 20 ಸಾವಿರ ನಿವಾಸಿಗಳಿಗೆ ಈ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನ ಆಸರೆಯಾಗಿದೆ. ಸಾರ್ವಜನಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ, ಆರ್‌ಎಸ್‌ಎಸ್ ಶಾಖೆ ಸೇರಿ ಹಿರಿಯ ನಾಗರಿಕರ ವಾಕಿಂಗ್, ಸ್ಥಳಿಯ ಯುವಜನತೆಯ ಆಟ, ವ್ಯಾಯಾಮ ಎಲ್ಲವೂ ಇಲ್ಲಿ ನಡೆಯುತ್ತಿದೆ. ಈಗ ಕೊಠಡಿ ನಿರ್ಮಿಸಿದರೆ ವಿಶಾಲವಾದ ಮೈದಾನ ಕಿರಿದಾಗುತ್ತದೆ ಎಂದು ಕೊಠಡಿ ನಿಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಇರುವ ಶಾಲಾ ಕೊಠಡಿಗಳು ಸೋರುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ನೂತನ ಶಾಲಾ ಕೊಠಡಿಗಳನ್ನು ನಿರ್ಮಿಸುವಂತೆ ಇಲ್ಲಿನ ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಕರು ಮನವಿ ಮಾಡಿದ ಮೇರೆಗೆ ಕೆಂಕೆರೆ ರಸ್ತೆಯ ಕಾಲೇಜು ಬಳಿ ನಾಲ್ಕು, ಹುಳಿಯಾರು ಬಳಿ ನಾಲ್ಕು ಕೊಠಡಿಗಳನ್ನು ಕಟ್ಟುತ್ತಿದ್ದೇವೆ. ಅಲ್ಲದೆ ಇಲ್ಲಿಯೇ ಕೊಠಡಿಗಳನ್ನು ನಿರ್ಮಿಸಲು ಅಗತ್ಯ ದಾಖಲಾತಿಗಳನ್ನು ಸಲ್ಲಿಸಲಾಗಿದೆ. ಮೊದಲೇ ಹೇಳಿದ್ದರೆ ಸ್ಥಳ ಬದಲಾವಣೆಗೆ ಯೋಚಿಸಬಹುದಿತ್ತು. ಈಗ ಕಾಲ ಮಿಂಚಿ ಹೋಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಉದ್ದೇಶವೇ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆವಿಗೆ ಒಂದೇ ಕ್ಯಾಂಪಸ್‌ನಲ್ಲಿ ತರುವುದಾಗಿದೆ. ಈ ನಿಟ್ಟಿನಲ್ಲಿ ಹುಳಿಯಾರಿನ ಎಂಪಿಎಸ್ ಶಾಲೆ ಹಾಗೂ ಕೆಂಕೆರೆ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಲೀನ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆ ಮಾಡಿದ್ದಾರೆ. ಭವಿಷ್ಯ ದಿನಗಳಲ್ಲಿ ಹುಳಿಯಾರಿನಲ್ಲಿರುವ ಪ್ರಾಥಮಿಕ ಶಾಲೆಯೂ ಕೆಂಕೆರೆ ರಸ್ತೆಯ ಶಾಲಾ ಆವರಣಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಆಗ ಈಗ ಕಟ್ಟುವ ಕೊಠಡಿಗಳೂ ಪಾಳು ಬೀಳುತ್ತವೆ ಎಂದು ಹಿರಿಯ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.
ಇದರಿಂದ ಗರಂ ಆದ ಸಚಿವರು ನನ್ನ ಹತ್ತಿರ ಚರ್ಚೆ ಮಾಡಕೂಡದು. ಎಲ್ಲರನ್ನೂ ಕೇಳಿ ಸರ್ಕಾರಿ ಕೆಲಸ ಮಾಡಲಾಗುವುದಿಲ್ಲ. ಇದು ಶಾಲಾ ಮೈದಾನವಾಗಿದ್ದು ವಿದ್ಯಾರ್ಥಿಗಳಿಗಷ್ಟೆ ಆಟಕ್ಕೆ ಅವಕಾಶ. ಸಾರ್ವಜನಿಕರಿಗಲ್ಲ ಎಂದರಲ್ಲದೆ ಎಲ್ಲಿ ಕಟ್ಟಬೇಕು, ಕಟ್ಟಬಾರದು ಎಂಬುದನ್ನು ನಿಮ್ಮಿಂದ ಹೇಳಿಸಿಕೊಳ್ಳಬೇಕಿಲ್ಲ. ಗೊತ್ತಿದೆ ಹೋಗ್ರಿ ಎಂದೇಳಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.