

ತುಮಕೂರು : ಉದಾಸೀನ, ಬೇಜಾಬ್ದಾರಿತನ ಒಳ್ಳೆಯದಲ್ಲ. ಪರಸ್ಪರ ಕಾಲೆಳೆಯುವ ಕಬಡ್ಡಿ ಆಟ ಬಿಟ್ಟು, ಮತ್ತೊಬ್ಬರಿಗೆ ಸಹಕಾರ ನೀಡುವ ಖೋ-ಖೋ, ರಿಲೇ ಅಂತಹ ಕ್ರೀಡಾ ಮನಸ್ಸು ಸರ್ಕಾರಿ ನೌಕರರದ್ದಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪರೋಕ್ಷವಾಗಿ ಎಚ್ಚರಿಸಿದರು.
ನಗರದ ಎಸ್‌ಎಸ್‌ಐಟಿ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 2 ದಿನಗಳ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ-21 ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು ವೇತನದ ಋಣದಲ್ಲಿದ್ದರೆ, ಜನಪ್ರತಿನಿಧಿಗಳಾದ ನಾವು ಮತದಾರರ ಋಣದಲ್ಲಿದ್ದೇವೆ. ನಮಗೆ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜವಾಬ್ದಾರಿ ಅರಿತು ಕೆಲಸ ಮಾಡಿದಿದ್ದರೆ ನಾವೆಲ್ಲರೂ ದ್ರೋಹಿಗಳಾಗುತ್ತೇವೆ ಎಂದರು.
ಸದಾ ಒಂದಿಲ್ಲೊಂದು ಒತ್ತಡದಲ್ಲಿಯೇ ಯಾಂತ್ರೀಕರಣ ಜೀವನ ನಡೆಸುತ್ತಿರುವ ಜನರ ಮೈ, ಮನಸ್ಸುಗಳು ಹಗುರವಾಗಲು ಕ್ರೀಡೆ, ಸಂಗೀತ, ನಾಟಕ, ಓದು ಅಗತ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸಿನಲ್ಲಿರುವ ದುಗುಡಗಳು ಕಡಿಮೆಯಾಗುವುದರ ಜತೆಗೆ, ಮುಂಬರುವ ಸವಾಲುಗಳನ್ನು ಎದುರಿಸಲು ಹೊಸ ಹುರುಪು ಸಿಗಲಿದೆ ಎಂದು ಜೆಸಿಎಂ ಆಶಿಸಿದರು.
ಕರೊನಾ ಸಂಕಷ್ಟ ಸಂದರ್ಭದಲ್ಲಿ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ಉಪಚುನಾವಣೆ, ಗ್ರಾಪಂ ಚುನಾವಣೆಯಲ್ಲಿ ಲೋಪವಾಗದಂತೆ ನಿರ್ವಹಿಸುವ ಮೂಲಕ ನೆರೆ ರಾಜ್ಯಗಳಿಗೆ ಮಾದರಿಯಾಗಿದ್ದಾರೆ. ಕರೊನಾ ಸಂದರ್ಭದಲ್ಲಿ ಕಚೇರಿಗಳಲ್ಲಿಯೇ ಅಕ್ಕಪಕ್ಕದವರನ್ನು ಮಾತನಾಡಿಸದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈಗ ಕ್ರೀಡೆಗಳ ಮೂಲಕ ಮತ್ತೆ ಸೌಹಾರ್ದತೆ ಬೆಳೆದು, ಹೊಸ ವಾತಾವರಣ ನಿರ್ಮಾಣವಾಗಲಿ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಆಶಿಸಿದರು.
ಜಿಪಂ ಉಪಾಧ್ಯಕ್ಷೆ ಶಾರದಾ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಕೆಂಪಚೌಡಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ನರಸಿಂಹರಾಜು ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್, ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ವಿವಿಧ ತಾಲೂಕುಗಳ ಅಧ್ಯಕ್ಷರಾದ ಪರಶಿವಮೂರ್ತಿ, ವೆಂಕಟೇಶ್, ಲಕ್ಷ್ಮೀಶ್, ನಾರಾಯಣ್, ವೆಂಕಟೇಶ್, ಪರಮೇಶ್ವರಪ್ಪ, ಲಕ್ಷ್ಮಣ್ ಇತರರಿದ್ದರು.
ಸರ್ಕಾರಿ ನೌಕರರು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ಹೊಸ ಮನಸ್ಸಿನೊಂದಿಗೆ ಕೆಲಸಕ್ಕೆ ಹಾಜರಾಗಿ ಕ್ರೀಡೆಗಳ ಮೂಲಕವಾದರೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಕೆಲಸ ಆಗಲಿ. ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣ ಹೊಸದಾಗಿ ನಿರ್ಮಾಣ ಹಂತದಲ್ಲಿದ್ದು, ಸ್ಮಾರ್ಟ್‌ಸಿಟಿಯಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಜಿ.ಬಿ.ಜೋತಿಗಣೇಶ್, ನಗರ ಶಾಸಕ