

ತುಮಕೂರು : ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆ ಬೆನ್ನಲ್ಲೇ ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ನೇಮಕ ಚರ್ಚೆ ಈಗ ಆರಂಭವಾಗಿದೆ. ಸ್ವಾತಂತ್ರೃ ದಿನಾಚರಣೆ ಸನಿಹ ಹಿನ್ನೆಲೆಯಲ್ಲಿ 2-3 ದಿನದೊಳಗೆ ಉಸ್ತುವಾರಿ ಸಚಿವರ ನೇಮಕ ಅಂತಿಮವಾಗಲಿದ್ದು, ಈ ಬಾರಿ ಜಿಲ್ಲೆಯಿಂದ ಇಬ್ಬರು ಸಚಿವರಾಗಿರುವುದರಿಂದ ಸಹಜವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗುತ್ತಾರೆಂಬ ಕುತೂಹಲ ಪಕ್ಷದಲ್ಲಿ, ಸಾರ್ವಜನಿಕ ವಲಯದಲ್ಲಿದೆ.
ಎರಡನೇ ಬಾರಿ ಸಂಪುಟ ದರ್ಜೆ ಸಚಿವರಾಗುತ್ತಿರುವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದು ಅವರಿಗೆ ಜಿಲ್ಲೆಯ ಜವಾಬ್ದಾರಿ ಮತ್ತೆ ವಹಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ತಿಪಟೂರು ಕ್ಷೇತ್ರ ಪ್ರತಿನಿಧಿಸುವ ಬಿ.ಸಿ.ನಾಗೇಶ್‌ಗೆ ನೆರೆಯ ಹಾಸನ ಜಿಲ್ಲೆಯ ಉಸ್ತುವಾರಿ ಸಿಗಲಿದೆ ಎಂಬುದು ಅವರ ಅಭಿಮಾನಿಗಳ ಹಾಗೂ ಪಕ್ಷದ ಕಾರ್ಯಕರ್ತರ ನಿರೀಕ್ಷೆಯಾಗಿದೆ.
ಜೆಸಿಎಂ ಉಸ್ತುವಾರಿ ತಪ್ಪಿಸಲು ಯತ್ನ: ಕಳೆದ 2 ವರ್ಷಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಮಾಧುಸ್ವಾಮಿ ಅವರನ್ನು ಬದಲಿಸಿ ತಮ್ಮ ಕೈಗೊಂಬೆಯಂತೆ ಕುಣಿಯುವವರನ್ನು ತಂದುಕೂರಿಸಲು ಜಿಲ್ಲಾ ಬಿಜೆಪಿಯ ಹಲವು ಮುಖಂಡರು ಪ್ರಯತ್ನ ಮಾಡಿದ್ದಾರಾದರೂ ಅದು ಕೈಗೂಡಿರಲಿಲ್ಲ. ಈಗಲೂ ಜೆಸಿಎಂಗೆ ಉಸ್ತುವಾರಿ ಹೊಣೆ ನೀಡಬಾರದೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಸರಳತೆ, ಪಕ್ಷನಿಷ್ಠೆ ಪ್ರತಿಫಲವಾಗಿ ಮೊದಲ ಬಾರಿ ಸಚಿವರಾಗಿರುವ ಬಿ.ಸಿ.ನಾಗೇಶ್‌ಗೆ ತವರು ಜಿಲ್ಲೆಯ ಉಸ್ತುವಾರಿ ವಹಿಸುವ ಮಹದಾಸೆ ಮನದಲ್ಲೇ ಇದೆಯಾದರೂ ಅವರು ಎಲ್ಲಿಯೂ ತೋರ್ಪಡಿಸಿಕೊಳ್ಳದೆ ಸಂಘಟನೆ ವಹಿಸುವ ಯಾವುದೇ ಜವಾಬ್ದಾರಿಯನ್ನು ಮಾಡುವುದಾಗಿ ಹೇಳುವ ಮೂಲಕ ತಮ್ಮೊಳಗಿನ ಆಸೆಯನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಆದರೆ, ಹಾಸನ ಉಸ್ತುವಾರಿ ನೇಮಕ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ರೇವಣ್ಣ ಅವರ ಸಲಹೆಯನ್ನು ಸಿಎಂ ಪಡೆಯಬಹುದೆಂಬ ರಾಜಕೀಯ ಲೆಕ್ಕಾಚಾರಗಳಿವೆ. ಹಾಗಾಗಿ, ಬಿಜೆಪಿ ಕಟ್ಟಾಳು ನಾಗೇಶ್ ಅವರನ್ನು ಜೆಡಿಎಸ್ ಮುಖಂಡರು ಅಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ. ಪಕ್ಷ, ಸಂಘಟನೆ ವಹಿಸುವ ಯಾವುದೇ ಜವಾಬ್ದಾರಿಯನ್ನು ನಾಗೇಶ್ ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದು ಯಾವುದಕ್ಕೂ ಅವರು ಲಾಬಿ ಮಾಡುವ ಜಾಯಮಾನದವರಲ್ಲ.
ನಾಗೇಶ್‌ಗೆ ಶಿಕ್ಷಣ ಖಾತೆ ? : ಹಳೇ ಮೈಸೂರು ಭಾಗದಲ್ಲಿ ಬ್ರಾಹ್ಮಣ ಸಮುದಾಯದ ಎಸ್.ಸುರೇಶ್‌ಕುಮಾರ್, ಎ.ರಾಮದಾಸ್, ಬಿ.ಸಿ.ನಾಗೇಶ್ ಶಾಸಕರಾಗಿದ್ದು ಅದೃಷ್ಟದಾಟದಲ್ಲಿ ನಾಗೇಶ್‌ಗೆ ಸಚಿವ ಸ್ಥಾನ ಒಲಿದು ಬಂದಿದೆ. ಸುರೇಶ್‌ಕುಮಾರ್ ವಹಿಸಿಕೊಂಡಿದ್ದ ಪ್ರಾಥಮಿಕ, ಪ್ರೌಢಶಿಕ್ಷಣ ಖಾತೆಯ ಜವಾಬ್ದಾರಿಯನ್ನು ನಾಗೇಶ್ ಹೆಗಲಿಗೆ ವಹಿಸುವ ನಿರೀಕ್ಷೆಗಳಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ಆರ್‌ಎಸ್‌ಎಸ್, ಎಬಿವಿಪಿ ಹಿನ್ನೆಲೆಯಿಂದ ಬಂದವರಿಗೆ ವಹಿಸಲಾಗಿದೆ ಎಂಬ ತರ್ಕ ಹುಟ್ಟ್ಟಿಕೊಂಡಿದೆ.
ಆರ್‌ಡಿಪಿಆರ್ ಮೇಲೆ ಜೆಸಿಎಂ ಕಣ್ಣು : ಜನರೊಂದಿಗೆ ಬೆರೆಯುವ ಖಾತೆ ಬಯಸುವ ಜೆ.ಸಿ.ಮಾಧುಸ್ವಾಮಿ ಅವರಿಗೆ ಬಿಎಸ್‌ವೈ ಸಂಪುಟದಲ್ಲಿ ಬೊಮ್ಮಾಯಿ ವಹಿಸಿಕೊಂಡಿದ್ದ ಕಾನೂನು, ಸಂಸದೀಯ ಹೊಣೆಯನ್ನು ವರ್ಗಾಯಿಸಲಿದ್ದಾರೆಂಬ ಚರ್ಚೆ ನಡೆದಿದೆ. ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಮಾಧುಸ್ವಾಮಿ ಕಣ್ಣಿಟ್ಟಿರುವರಾದರೂ ಅದಕ್ಕಾಗಿ ಲಾಬಿ, ಒತ್ತಡ ತಂತ್ರ ಅನುಸರಿಸಿ ಸಿಎಂ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ.
ಯಾವ ಖಾತೆ ಕೊಟ್ಟರೂ ನಿಭಾಯಿಸುವೆ : ಸಚಿವ ಸಂಪುಟದಲ್ಲಿ ಅವಕಾಶ ಸಿಗದಿದ್ದಾಗ ಅಸಮಾಧಾನ ಸ್ಫೋಟಗೊಳ್ಳುವುದು ರಾಜಕಾರಣದಲ್ಲಿ ಸ್ವಾಭಾವಿಕ. ಬೇಸರಗೊಂಡವರು ಸಮಾಧಾನವಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ನೂತನ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬುಧವಾರ ಸಂಜೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಬಾರಿ ಸಣ್ಣ ನೀರಾವರಿ ಖಾತೆಗೆ ಹಠ ಮಾಡಿದ್ದೆ. ಈ ಸಲ ಯಾವುದೇ ರೀತಿಯ ಒತ್ತಾಯ ಮಾಡುವುದಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಸಾಕಷ್ಟು ಕೆಲಸ ಅಪೂರ್ಣಗೊಂಡಿದ್ದವು. ಹಾಗಾಗಿ, ಆ ಕೆಲಸಗಳು ಮಧ್ಯಕ್ಕೆ ನಿಲ್ಲಲಿವೆ ಎಂಬ ಕಾರಣಕ್ಕೆ ಹಠ ಮಾಡಿ ಖಾತೆ ಪಡೆದಿದ್ದೆ. 250 ಕೋಟಿ ರೂ., ವೆಚ್ಚದ ಕಾಮಗಾರಿಗಳು ಆರಂಭವಾಗಿವೆ. ಸಮಾಧಾನ ಇದೆ. ಈಗ ಯಾವ ಖಾತೆ ಕೊಟ್ಟರೂ ಪರವಾಗಿಲ್ಲ ಎಂದರು.