ವರ್ಷಾಂತ್ಯದೊಳಗೆ ಮಸವನಗಟ್ಟ, ಸಣ್ಣೇನಹಳ್ಳಿ ಕೆರೆಗೆ ನೀರು ; ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

24 TPT-2
Published on

ತಿಪಟೂರು : ಅಮೂಲ್ಯವಾದ ನೀರನ್ನು ಎಲ್ಲರೂ ಹಂಚಿಕೊಂಡು ಬಾಳಿದಾಗ ನೆಮ್ಮದಿಯಾಗಿರಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮಸವನಟ್ಟ ಮತ್ತು ಸಣ್ಣೇನಹಳ್ಳಿಯ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ನೆರೆಯ ಚನ್ನರಾಯಪಟ್ಟಣ ಮತ್ತು ಹಾಸನ ಜಿಲ್ಲೆಗಳ ರಾಜಕಾರಣ ಮತ್ತು ಅಲ್ಲಿನ ನೀರು, ರಸ್ತೆಗಳ ಸ್ಥಿತಿಗತಿ ನೋಡಿದ ದಿನದಂದೇ ನಮ್ಮ ಜಿಲ್ಲೆಗೂ ಯಥೇಚ್ಛ ನೀರು ಪಡೆಯಬೇಕೆಂದು ತೀರ್ಮಾನಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದು ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಲಾಗಿದೆ. ಕರೊನಾ ಕಾರಣದಿಂದ ಕಾಮಗಾರಿ ನಡೆಸುವುದು ವಿಳಂಬವಾಯಿತು. ಆದರೂ ಜನತೆ ಬಿಜೆಪಿ ಮೇಲಿಟ್ಟಿರುವ ಭರವಸೆಗಳನ್ನು ಹುಸಿಗೊಳಿಸದಿರಲು ತೀರ್ಮಾನಿಸಿ, ನನ್ನಿಂದ ಸಾಧ್ಯವಾದ ಪ್ರಯತ್ನ ಮಾಡಿದ್ದೇನೆ ಎಂದರು.

ಮಸವನಗಟ್ಟ ಮತ್ತು ಸಣ್ಣೇನಹಳ್ಳಿ ಕೆರೆಗಳಿಗೆ ತಲಾ 5 ಕೋಟಿ ರೂಪಾಯಿ ತಾಲೂಕಿನ ಇತರ ಕೆರೆಗಳಿಗೆ ಒಟ್ಟು 180 ಕೋಟಿ ರೂಪಾಯಿ ಮತ್ತು ಹೇವಾವತಿ ನೀರು ಹರಿಸಿಕೊಳ್ಳಲು 35 ರಿಂದ 37 ಕೋಟಿ ಬಿಡಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ತಿಪಟೂರು ತಾಲೂಕಿನಲ್ಲಿ ನಡೆದಿವೆ. 8 ರಿಂದ 9 ತಿಂಗಳಲ್ಲಿ ಈ ಕಾಮಗಾರಿ ಮುಗಿಯಲಿದೆ. ಸಾಧ್ಯವಾಗದಿದ್ದರೆ ಜಾಕ್‌ವೆಲ್ ನಿರ್ಮಿಸಿಯಾದರೂ ಈ ವರ್ಷವೇ ನೀರು ಪೂರೈಸುವ ಗುರಿ ಹೊಂದಲಾಗಿದೆ ಎಂದರು.

ಶಾಸಕ ನಾಗೇಶ್ ಬೆನ್ನು ಬಿದ್ದ ಬೇತಾಳನಂತೆ: ಕೇವಲ 3.2 ಎಂಸಿಎಫ್‌ಟಿ ನೀರು ಹರಿಸಲು 5 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಲಭ್ಯ ನೀರನ್ನು ಮಿತವಾಗಿ ಬಳಸಬೇಕು. ಹೆಚ್ಚು ನೀರು ಬಯಸುವ ಅಡಿಕೆಯಂತಹ ಬೆಳೆ ಬೆಳೆೆಯಲು ಮುಂದಾದರೆ ಕಡೆಗೆ ಬೆಳೆಯೂ ಇಲ್ಲ, ನೀರೂ ಇಲ್ಲದೆ ಆಗುತ್ತದೆ. ಕೆಲಸ ಪಡೆಯುವಲ್ಲಿ ಶಾಸಕ ನಾಗೇಶ್ ಬೆನ್ನು ಬಿದ್ದ ಬೇತಾಳನಂತೆ. ಇಂತಹ ಶಾಸಕರು ಸಿಕ್ಕಿರುವುದು ನಿಮ್ಮೆಲ್ಲರ ಅದೃಷ್ಟ ಎಂದು ಸಚಿವ ಮಾಧುಸ್ವಾಮಿ ಬಣ್ಣಿಸಿದರು.

ಶಾಸಕ ಬಿ.ಸಿ.ನಾಗೇಶ್, ಮಸವನಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ದಿನೇಶ್, ಮುಖಂಡರಾದ ಬಿಸಲೇಹಳ್ಳಿ ಜಗದೀಶ್, ಸಣ್ಣ ನೀರಾವರಿ ಇಲಾಖೆಯ ಎಇಇ ಲಕ್ಷ್ಮಯ್ಯ, ಇಂಜಿನಿಯರ್ ದೊಡ್ಡಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net