

ತುಮಕೂರು : ಬದುಕಿನೊಂದಿಗೆ ನಂಟಿರುವ ಖಾತೆ ಬಯಸಿದ್ದೆ. ಇಂತಹುದೇ ಖಾತೆ ಬೇಕೆಂದು ಹಠ ಮಾಡಿರಲಿಲ್ಲ. ಆದರೆ, ನಾಲ್ಕು ಬಾರಿ ಖಾತೆ ಬದಲಾಯಿಸಿದ್ದರಿಂದ ಸಹಜವಾಗಿ ಮನಸಿಗೆ ತೀವ್ರ ಬೇಸರವಾಗಿ ರೆಬೆಲ್ ಆಗಬೇಕಾಯಿತು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ 72ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಸಚಿವನಿಗೆ 4 ಬಾರಿ ಖಾತೆ ಬದಲಾವಣೆ ಮಾಡಿದರೆ ಯಾರಿಗೆ ತಾನೆ ಬೇಸರವಾಗುವುದಿಲ್ಲ. ಹಾಗಾಗಿ, ತೀವ್ರ ಬೇಸರವಾಗಿತ್ತು. ಕೆಲಸ ಮಾಡದಿದ್ದರೆ ಖಾತೆ ವಾಪಸ್ ಪಡೆಯಲಿ, ಇದ್ಯಾವ ಕಾರಣವೂ ಇಲ್ಲದೆ ಖಾತೆ ಬದಲಾಯಿಸಿದ್ದರಿಂದ ಮನಸ್ಸಿಗೆ ನೋವಾಗಿ ಗಣರಾಜ್ಯೋತ್ಸದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಚಿವ ಸ್ಥಾನಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದು ನಿಜ ಎಂದರು.
ನನಗೆ ಮುಖ್ಯಮಂತ್ರಿಗಳು ಕಾನೂನು ಮತ್ತು ಸಂಸದೀಯ ಜತೆ ಇದ್ದ ಸಣ್ಣ ನೀರಾವರಿ ಖಾತೆ ಬಿಟ್ಟು ಕೊಡುವಂತೆ ಹೇಳಿದಾಗ, ನಾನು ಈ ಖಾತೆಯಲ್ಲಿ ರೈತರಿಗೆ ಉಪಯೋಗವಾಗುವಂತಹ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದೇನೆ. ಕಾನೂನು ಖಾತೆ ತಗೊಳ್ಳಿ, ಸಣ್ಣ ನೀರಾವರಿ ಖಾತೆ ನನಗೆ ಬಿಟ್ಟು ಬಿಡಿ ಎಂದು ಮೊದಲು ಕೇಳಿದ್ದೆ. ಆದರೆ, ಮುಖ್ಯಮಂತ್ರಿಗಳು ನನಗೆ ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಕೊಟ್ಟರು. ಆಗ ನಾನು ಏನೂ ಹೇಳಲಿಲ್ಲ. ಇದಾದ ಒಂದು ದಿನದ ಬಳಿಕ ನನಗೆ ಗೊತ್ತಿಲ್ಲದಂತೆ ಖಾತೆ ಬದಲಾಯಿಸಿ ಪ್ರವಾಸೋದ್ಯಮ ಹಾಗೂ ವಕ್ಫ್ ಮತ್ತು ಹಜ್ ಖಾತೆ ನೀಡಿದರು. ಆಗ ನನಗೆ ಸಹಜವಾಗಿಯೇ ತುಂಬ ನೋವಾಯಿತು. ನನ್ನ ಒಳ್ಳೆ ತನವೇ ನನಗೆ ಮುಳುವಾಯಿತಲ್ಲ ಎಂದು ಬಂಡಾಯವೇಳುವ ಸನ್ನಿವೇಶ ಸೃಷ್ಟಿಯಾಯಿತು ಎಂದು ಸ್ಪಷ್ಟಪಡಿಸಿದರು. ಚಿಕ್ಕನಾಯಕಹಳ್ಳಿ ತಾಲೂಕಿಗೆ ಹೇಮೆ ಹರಿಸುವ ವಿಚಾರದಲ್ಲಿ 2011 ರಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಬೆನ್ನತ್ತಿ ಚಾಲನೆ ಕೊಡಿಸಿರುವುದಾಗಿ ನಾನು ಹೇಳಿದ್ದೇನೆಯೇ ಹೊರತು ನನ್ನೊಬ್ಬನಿಂದಲೇ ಕಾಮಗಾರಿ ಆಯಿತು ಎಂದು ನಾನೆಲ್ಲೂ ಹೇಳಿಲ್ಲ ಎಂದು ಮಾಧುಸ್ವಾಮಿ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಇದ್ದರು.
ಸ್ಮಾರ್ಟ್‌ಸಿಟಿ ಕಾಮಗಾರಿ ಚುರುಕುಗೊಳಿಸುವೆ.. : 2 ವರ್ಷಗಳಲ್ಲಿ ಸ್ಮಾರ್ಟ್‌ಸಿಟಿಯ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದೆ. ಸ್ಮಾರ್ಟ್‌ಸಿಟಿ ಕಾಮಗಾರಿ ವಿಳಂಬದಿಂದ ಜನರ ಅನುಭವಿಸುತ್ತಿರುವ ತೊಂದರೆಗಳ ಅರಿವು ಸೂಕ್ಷ್ಮ ಮನಸಿನವನಾದ ನನಗೆ ಗೊತ್ತಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ಪ್ರಗತಿ ಪರಿಶೀಲಿಸುವ ಶಾಸನಬದ್ಧ ಅಧಿಕಾರ ನನಗಿಲ್ಲ. ಹಾಗಾಗಿ, ನನ್ನಿಂದ ತಪ್ಪಾಗಿದೆ. ಇನ್ಮುಂದೆ ಆ ರೀತಿಯಾಗಲು ಅವಕಾಶ ಕೊಡುವುದಿಲ್ಲ. ಸ್ಮಾರ್ಟ್‌ಸಿಟಿ ಕಾಮಗಾರಿ ಕ್ಷಿಪ್ರಗೊಳಿಸಲು ಇನ್ನೊಂದು ವಾರದೊಳಗೆ ಸಂಸದರು, ಶಾಸಕರು, ಮೇಯರ್ ಹಾಗೂ ಸಂಬಂಧಪಟ್ಟ ಎಲ್ಲರನ್ನು ಕರೆಸಿ ಸಭೆ ನಡೆಸುತ್ತೇನೆ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದರು.
ನನ್ನೆಲ್ಲ ಶ್ರಮ, ಮನಸಿಟ್ಟು ಕೆಲಸ ಮಾಡುವಾಗ ಕನಸು ಈಡೇರದಿದ್ದಾಗ ಬೇಸರವಾಗಿದ್ದು ನಿಜ. ಹಾಗಾಗಿ, ನಾನು ರಾಜೀನಾಮೆ ಕೊಡಲು ತೀರ್ಮಾನ ಮಾಡಿದ್ದೆ. ಆದರೆ, ಗುರು, ಹಿರಿಯರು, ಹಿತೈಷಿಗಳೆಲ್ಲರ ಆಶಯದಂತೆ ಸಣ್ಣ ನೀರಾವರಿ ಖಾತೆ ಸಿಕ್ಕಿದೆ. ನಾನೆಂದೂ ಎಲೈಟ್ ಖಾತೆ ಬಯಸಿಲ್ಲ. ಆಡಳಿತ ಮಾಡುವುದನ್ನು ನಾನು ಯಾರಿಂದಲೂ ಕಲಿಯುವ ಅವಶ್ಯಕತೆ ಇಲ್ಲ. ಕೆಲಸ ಮಾಡುವ ಹುಚ್ಚಿನಿಂದ, ಜನರೊಂದಿಗೆ ಬೆರೆಯುವ ಖಾತೆಯಷ್ಟೇ ಬಯಸಿದ್ದೆ. ಜೆ.ಸಿ.ಮಾಧುಸ್ವಾಮಿ ಸಣ್ಣನೀರಾವರಿ ಸಚಿವ