

ಸೋಮವಾರಪೇಟೆ: ಜೇಸಿಐ ಪುಷ್ಪಗಿರಿ ಸೋಮವಾರಪೇಟೆಯ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಸಂಕಪ್ಪ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನೂತನ ಸಾಲಿನ ಅಧ್ಯಕ್ಷೆ ಜಗದಾಂಬಾ ಗುರುಪ್ರಸಾದ್, ಕಾರ್ಯದರ್ಶಿ ವಿನುತಾ ಸುದೀಪ್ ಹಾಗೂ ಆಡಳಿತ ಮಂಡಳಿಗೆ ವಲಯಾಧ್ಯಕ್ಷ ವಿಜಯಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು.
ನಂತರ ಮಾತನಾಡಿದ ಅಧ್ಯಕ್ಷೆ ಜಗದಾಂಬಾ, ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವಾ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಸಂಸ್ಥೆಯಲ್ಲಿ ಹಲವು ರಾಜ್ಯ ಮಟ್ಟದ ತರಬೇತಿಗಳನ್ನು ನೀಡುವ ಮೂಲಕ ಸಮಾಜಕ್ಕೆ ಹಲವು ಯುವ ನಾಯಕರನ್ನು ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಸದಸ್ಯರ ಜೀವನ ಭದ್ರತೆಗಾಗಿ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, 40 ವಯೋಮಾನದೊಳಗಿನ ಎಲ್ಲರೂ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಜೇಸಿಐ ವಲಯ ಉಪಾಧ್ಯಕ್ಷ ಜಗದೀಶ್ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ತರಬೇತಿಯೊಂದಿಗೆ ಸೇವಾವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಯುವಜನತೆಗೆ ವ್ಯಕ್ತಿತ್ವ ವಿಕಸನ, ಮಾರ್ಗದರ್ಶನ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿಕೊಂಡು ಬರುತ್ತಿದೆ. ಸಂಸ್ಥೆಯ ಸದಸ್ಯರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ, ಜನರಿಗೆ ಇನ್ನಷ್ಟು ಸೇವೆ ನೀಡಬೇಕೆಂದರು.
ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ವಸಂತ್, ಎಂ.ಎ.ರುಬೀನಾ, ಮಹಿಳಾ ಜೇಸಿಐ ಅಧ್ಯಕ್ಷೆ ಜ್ಯೋತಿ ರಾಜೇಶ್, ಜೆಜೆಸಿ ಅಧ್ಯಕ್ಷೆ ದಿಶಾ ಗಿರೀಶ್ ಇದ್ದರು.