ಗುಮ್ಮಟನಗರಿಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ, ಆಜಾದ್ ರಸ್ತೆಯಲ್ಲಿ ಅತಿಕ್ರಮಣ ತೆರವು

ATIKRAMANA TERAVU
ವಿಜಯಪುರದ ಆಜಾದ್ ರಸ್ತೆಯಲ್ಲಿರುವ ಕಟ್ಟಡಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು.
Published on

ವಿಜಯಪುರ: ಸಂಚಾರ ದಟ್ಟಣೆ ಹಾಗೂ ಬೀದಿ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆ ನಗರದ ಆಜಾದ್ ರಸ್ತೆಯಲ್ಲಿನ 14 ಕಟ್ಟಡಗಳನ್ನು ಸೋಮವಾರ ತೆರವುಗೊಳಿಸಲಾಯಿತು.

ಮಾಸ್ಟರ್ ಪ್ಲಾೃನ್-60ರಡಿಯ ಮುಖ್ಯ ರಸ್ತೆಯಾಗಿರುವ ಆಜಾದ್ ರಸ್ತೆ ತೀವ್ರ ಇಕ್ಕಟ್ಟಾಗಿತ್ತು. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಅಲ್ಲದೇ ಬೀದಿ ಬದಿ ವ್ಯಾಪಾರಸ್ಥರಿಗೂ ಸಮಸ್ಯೆಯಾಗಿದ್ದ ಕಾರಣ ಕಟ್ಟಡಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು.

ರಸ್ತೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ್ದ ಮಾಲೀಕರಿಗೆ 2022 ಜುಲೈನಲ್ಲಿಯೇ ನೊಟೀಸ್ ನೀಡಲಾಗಿತ್ತು. ಆದರೆ, ಈವರೆಗೂ ಯಾರೊಬ್ಬರೂ ತೆರವುಗೊಳಿಸದೇ ಇರುವ ಕಾರಣಕ್ಕೆ ಮತ್ತೊಮ್ಮೆ ಅವರಿಗೆ ಸಾಮಾಜಿಕ ನ್ಯಾಯದ ದೃಷ್ಠಿಯಿಂದ 48 ಗಂಟೆಗಳ ನೊಟೀಸ್ ನೀಡಿ ಅತಿಕ್ರಮಣ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಅದಾಗ್ಯೂ ತೆರವುಗೊಳಿಸದ ಹಿನ್ನೆಲೆ ಜೆಸಿಬಿ ಬಳಿಸಿ ಕಟ್ಟಡ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತೆಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.

ಜೆಸಿಬಿಗಳ ಘರ್ಜನೆ ಆರಂಭಗೊಳ್ಳುತ್ತಿದ್ದಂತೆ ಮಾಲೀಕರು ಕೆಲ ಕಾಲ ಪ್ರತಿರೋಧ ವ್ಯಕ್ತಪಡಿಸಿದರಲ್ಲದೇ ಬಳಿಕ ತೆರವು ಕಾರ್ಯಾಚರಣೆಗೆ ಅನುಕೂಲ ಕಲ್ಪಿಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಾಚರಣೆಯ ಮಾಹಿತಿ ಪಡೆದು, ಮುಂಬರುವ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ಅತಿಕ್ರಮಣ ಮಾಡಿರುವ ಕುರಿತು ಪರಿಶೀಲಿಸಿ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ವಾಹನ ನಿಲುಗಡೆಗೆ ಅನುಕೂಲ ಕಲ್ಪಿಸಬೇಕು. ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಯುಕ್ತರಿಗೆ ಸೂಚಿಸಿದರು.

ಪಾಲಿಕೆಯ ಸಿಬ್ಬಂದಿ ಕಾರ್ಯಾಚರಣೆಗೆ ಸಾಥ್ ನೀಡಿದರೆ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು. ಸಾರ್ವಜನಿಕರು ಕಾರ್ಯಾಚರಣೆ ನೋಡಲು ಮುಗಿಬಿದ್ದರು. ತ್ವರಿತವಾಗಿ ಕಾರ್ಯಾಚರಣೆ ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net