ರಾಯಸಂದ್ರ ಕೆರೆಯಲ್ಲಿ ಗರ್ಜಿಸಿದ ಜೆಸಿಬಿ

13 09 205_BNG_RURAL_PAGE_2
Published on

ಆನೇಕಲ್​ : ಕೆರೆ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ಮನೆಗಳನ್ನು ಶುಕ್ರವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್​ ಸಮ್ಮುಖದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ನೊಂದಿಗೆ ತೆರವುಗೊಳಿಸಲಾಯಿತು. ಬೆಂಗಳೂರು ದಣ ತಾಲೂಕು ದೊಡ್ಡನಾಗಮಂಗಲ ಸರ್ವೇ ನಂಬರ್​ 54ರಲ್ಲಿನ ರಾಯಸಂದ್ರ ಕೆರೆಯು ಒಟ್ಟು 56.20ಎಕರೆ ಜಾಗವಿದ್ದು, ಇದರಲ್ಲಿ 4 ಎಕರೆ 22 ಗುಂಟೆ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಕೆಲ ಬಲಾಢ್ಯರು ನಕಲಿ ದಾಖಲೆ ಸೃಷ್ಟಿಸಿ ಬಡಾವಣೆ ಮಾಡಿ ಬಡಜನರಿಗೆ ಸೈಟು ಮಾರಾಟ ಮಾಡಿದ್ದು, ನೂರಾರು ಮಂದಿ ಮನೆ ಕಟ್ಟಿಕೊಂಡಿದ್ದರು. ಜೆಸಿಬಿಗಳ ಮೂಲಕ ಕಟ್ಟಡಗಳನ್ನು ನೆಲಸಮ ಮಾಡಿದ್ದು, ಈ ವೇಳೆ ಜನರು ಆಕ್ರೋಶ ಹೊರಹಾಕಿದರು. ಮನೆಗಳಲ್ಲಿನ ವಸ್ತುಗಳನ್ನು ಹೊರಗೆ ಇಟ್ಟುಕೊಂಡು ನಿವಾಸಿಗಳು ಬೀದಿಗೆ ಬಿದ್ದಿದ್ದು, ಕಣ್ಣೀರು ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆರೆ ಜಾಗ ಒತ್ತುವರಿ ಮಾಡಿಕೊಳ್ಳುವುದಲ್ಲದೆ ಸೈಟುಗಳನ್ನು ಮಾರಾಟ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಗದೀಶ್​ ತಿಳಿಸಿದರು.

ಎಲ್ಲರಿಗೂ ಒಂದೇ ನ್ಯಾಯ!: ಶ್ರೀಮಂತರು, ಬಡವರು ಎಂದು ನೋಡಲು ಸಾಧ್ಯ ಇಲ್ಲ. ಸರ್ಕಾರಿ ಭೂಮಿ ಅಥವಾ ಕೆರೆ ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ಮುಲಾಜಿಲ್ಲದೆ ತೆರವು ಮಾಡಲಾಗುವುದು. ಇಲ್ಲೇ ಇದ್ದ ಒಬ್ಬರು ಮನೆ ಕಟ್ಟಿಕೊಂಡಿದ್ದಲ್ಲದೆ ನಕಲಿ ದಾಖಲೆ ಸೃಷ್ಟಿ ಮಾಡಿ ಸೈಟ್​ ಮಾಡಿ ಮಾರಾಟ ಮಾಡಿದ್ದಾರೆ. ಆ ಎಲ್ಲ ಮನೆಗಳನ್ನು ತೆರವು ಮಾಡಿದ್ದೇವೆ ಎಂದು ಡಿಸಿ ತಿಳಿಸಿದರು.

56 ಎಕರೆ ಕೆರೆ ಜಾಗ ಇದ್ದು, ಈ ಜಾಗ ಒತ್ತುವರಿ ಮಾಡಿಕೊಂಡಿದ್ದವರ ಹಿಂದೆ ಯಾರ್ಯಾರು ಇದ್ದಾರೆ ಎನ್ನುವುದು ತನಿಖೆಯಿಂದ ಗೊತ್ತಾಗಲಿದೆ, ಕೇವಲ ಇಲ್ಲೇ ಮಾತ್ರ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಅಥವಾ ಬೇರೆ ಭಾಗದಲ್ಲೂ ಇದೇ ರೀತಿ ಒತ್ತುವಾರಿ ಮಾಡಿದ್ದಾರೆಯೆ ಎನ್ನುವುದನ್ನು ತನಿಖೆ ಮಾಡುತ್ತೇವೆ, ಕೆರೆ ಜತೆಗೆ ರಾಜ ಕಾಲುವೆಯನ್ನೂ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಕೂಡ ತೆರವು ಮಾಡುತ್ತೇವೆ ಎಂದರು.

ರಾಜಕಾಲುವೆ ಒತ್ತುವರಿ ಆಗಿದ್ದರೆ ಕ್ರಮ : ಸರ್ಕಾರಿ ಜಮೀನನ್ನು ಕದ್ದು ನಕಲಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡುವವರು ಎಷ್ಟೇ ಬಲಾಢ್ಯರಾಗಿದ್ದರೂ ಅವರನ್ನು ಬಿಡುವುದಿಲ್ಲ. ಪಿಇಎಸ್​ ಕಾಲೇಜು ಬಳಿ ಸರ್ಕಾರಿ ರಾಜ ಕಾಲುವೆ ಒತ್ತುವರಿ ಆಗಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಮುಂದಿನ ದಿನಗಳಲ್ಲಿ ಸರ್ವೇ ಮಾಡಿ ಒತ್ತುವರಿ ಆಗಿದ್ದರೆ ಮುಲಾಜಿ ಇಲ್ಲದೆ ತೆರವು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಜಗದೀಶ್​ ಹೇಳಿದರು.

ಮುಲಾಜಿಲ್ಲದೆ ಕ್ರಮ : ಖಾಸಗಿ ವ್ಯಕ್ತಿಯೊಬ್ಬರು ಕೆರೆಯಲ್ಲಿ 4 ಎಕರೆ 20 ಗುಂಟೆ ಜಮೀನನ್ನು ಒತ್ತುವರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಬಡಾವಣೆ ನಿರ್ಮಿಸಿದ್ದು, ಬಡವರಿಗೆ ಹದಿನೈದು ಇಪ್ಪತ್ತು ಲಕ್ಕೆ ನಿವೇಶನ ಮಾರಾಟ ಮಾಡಲಾಗಿದೆ. ಒತ್ತುವರಿ ಜಾಗವನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಒತ್ತುವರಿ ಮಾಡಿದ್ದವನ ವಿರುದ್ಧ ದೂರು ದಾಖಲು ಮಾಡುವುದಾಗಿ ಜಿಲ್ಲಾಧಿಕಾರಿ ಜಗದೀಶ್​ ತಿಳಿಸಿದ್ದಾರೆ.

300 ಎಕರೆ ಒತ್ತುವರಿ ತೆರವು ಮಾಡಿರುವ ಜಗದೀಶ್​ : ಜಗದೀಶ್​ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದ ಬಳಿಕ ಜಿಲ್ಲೆಯಲ್ಲಿ 300 ಎಕರೆಗೂ ಹೆಚ್ಚು ಸರ್ಕಾರಿ ಜಮೀನನ್ನು ಒತ್ತುವರಿ ತೆರವು ಮಾಡಿ ಸರ್ಕಾರದ ವಶಕ್ಕೆ ನೀಡಿದ್ದಾರೆ. ಇದರ ಬೆಲೆ 10,000 ಕೋಟಿಗೂ ಹೆಚ್ಚು ಆಗಲಿದೆ.

ರಾಮರೆಡ್ಡಿ ಎಂಬುವವರು ಜಮೀನು ನಮ್ಮದು ಎಂದು ಲ ಲ ಹಣ ಪಡೆದು ನಿವೇಶನ ಮಾರಾಟ ಮಾಡಿದ್ದಾರೆ. ಇಪ್ಪತ್ತು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದೇವೆ. ಆದರೆ, ಈಗ ಜಿಲ್ಲಾಡಳಿತ ಪೊಲೀಸರ ಸರ್ಪಗಾವಲಿನಲ್ಲಿ ನೋಟಿಸ್​ ಕೂಡ ನೀಡದೆ ಮನೆಗಳ ತೆರವುಗೊಳಿಸಿದ್ದಾರೆ. ನಿಲ್ಲಲು ನೆಲೆ ಇಲ್ಲ. > ಪ್ರಿಯಾ ಮನೆ ಕಳೆದುಕೊಂಡವರು ನಾವು ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆಗೆ ಅವಕಾಶ ನೀಡುವುದಿಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ತೆರವು ಕಾರ್ಯಾಚರಣೆ ಕೈಬಿಡಬೇಕು, ಇದರಲ್ಲಿ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ ನಮ್ಮ ಮನೆ ಕೆಡವಿ ಬೀದಿಗೆ ತಳ್ಳಿದರೆ ನಾವು ಎಲ್ಲಿ ಹೋಗಬೇಕು. > ಸುಕನ್ಯಾ ಮನೆ ಕಳೆದುಕೊಂಡವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net