

ನಂಜನಗೂಡು: ತಾಲೂಕಿನ ನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ನಿರ್ಲಕ್ಷೃ ವಹಿಸುತ್ತಿರುವುದು ಕಂಡುಬಂದಿದೆ.
ಕೂಲಿ ಇಲ್ಲದ ಬಡಜನರಿಗೆ ಸರ್ಕಾರದಿಂದ ಕೆಲಸ ಕೊಟ್ಟು ಕೂಲಿ ನೀಡುವುದು ನರೇಗಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ ಸಂಬಂಧಿಸಿದ ರೈತರು ಜಮೀನುಗಳಲ್ಲಿ ಬದು, ಕಾಲುವೆ ಮತ್ತು ಕೆರೆಗಳಲ್ಲಿ ಹೂಳು ತೆಗೆಯುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ನರೇಗಾ ಯೋಜನೆಯಲ್ಲಿ ಮಾಡಿಕೊಳ್ಳುವ ಅವಕಾಶವಿರುತ್ತದೆ. ಆದರೆ ನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಬಡಜನರ ಕೂಲಿಗೆ ಕತ್ತರಿ: ನೇರಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೇಪುರ ಕೆರೆ ಸಮೀಪವಿರುವ ಕೂಸಯ್ಯ ಜಮೀನಿನಿಂದ ದೇವಯ್ಯ ಜಮೀನಿನವರೆಗೆ ನೀರು ಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು ಎರಡು ಲಕ್ಷ ರೂ. ವೆಚ್ಚದ ಕಾಮಗಾರಿ ಇದಾಗಿದ್ದು, ಜೆಸಿಬಿ ಮೂಲಕ ಕಾಮಗಾರಿ ನಡೆಸಲಾಗಿದೆ. ಬಡ ಜನರಿಗೆ ಕೂಲಿ ಕೊಟ್ಟು ಕೆಲಸ ಮಾಡಿಸಬೇಕಾದ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇಂಜಿನಿಯರ್ ಸ್ಥಳಕ್ಕೆ ತೆರಳದೆ, ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಎನ್ನುವ ನಿರ್ಲಕ್ಷೃದ ಉತ್ತರಗಳನ್ನು ನೀಡುತ್ತಿರುವುದು ಕಂಡುಬಂದಿದೆ.
ಗ್ರಾಮೀಣ ಭಾಗದ ಬಡಜನರು ಪ್ರತಿದಿನ ಕೂಲಿಗಾಗಿ ಪರಿತಪಿಸುವುದನ್ನು ತಪ್ಪಿಸುವ ದೃಷ್ಟಿಯಿಂದ ವಾರ್ಷಿಕವಾಗಿ 150 ದಿನಗಳ ಕಾಲ ಕೂಲಿ ದೊರೆಯುವಂತೆ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದು, ಗ್ರಾಮ ಪಂಚಾಯಿತಿಗಳ ಮೂಲಕ ಹಲವು ಕಾಮಗಾರಿಗಳನ್ನು ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷೃದಿಂದ ಗ್ರಾಮದ ಕೆಲ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳಲು ಅಧಿಕಾರಿಗಳು, ಇಂಜಿನಿಯರ್‌ಗಳು ಸಹಕಾರ ನೀಡುತ್ತಿದ್ದಾರೆ. ಇದರಿಂದ ಬಡ ಜನರಿಗೆ ಅನ್ಯಾಯವಾಗುತ್ತಿದೆ.
ಈ ಬಗ್ಗೆ ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನರೇಗಾ ಯೋಜನೆಗೆ ಜೆಸಿಬಿ ಬಳಕೆ ಮಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕು. ಸ್ಥಳೀಯ ಬಡ ಜನರಿಗೆ ಕೂಲಿ ದೊರೆಕುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.