ಶಂಕಿತರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ

04Tmk_JCM_Meeting
Published on

ತುಮಕೂರು: ಕರೊನಾ ಸಂಬಂಧಿಸಿದಂತೆ ತಾಲೂಕು ಆಸ್ಪತ್ರೆ, ತಾಲೂಕು ಕೇಂದ್ರಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವರನ್ನು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ತಡೆಯಲು ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರನ್ನು (ಪ್ರೈಮರಿ ಆ್ಯಂಡ್ ಸೆಕೆಂಡರಿ ಕಾಂಟ್ಯಾಕ್ಟ್) ಸಂಪೂರ್ಣವಾಗಿ ಪತ್ತೆಹಚ್ಚಿ ಅವರನ್ನು ಕ್ವಾರಂಟೈನ್ ಮಾಡಿ, ಅವರ ಮೇಲೆ ನಿಗಾವಹಿಸಬೇಕು. ಎಲ್ಲರನ್ನೂ ಜಿಲ್ಲಾ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ, ನಿಗಾವಹಿಸುವುದು ಸುಲಭ ಎಂದರು.

ಶಂಕಿತರಿಗೆ ನೆಗೆಟಿವ್ ವರದಿ ಬಂದಿದ್ದರೂ ಕಡ್ಡಾಯವಾಗಿ 28 ದಿನಗಳ ಕಾಲ ಅವರನ್ನು ನಿಗಾವಣೆಯಲ್ಲಿಡಬೇಕು. ಇನ್ನೂ ಜಿಲ್ಲಾ ಆಸ್ಪತ್ರೆಯಲ್ಲೆ ಎಲ್ಲರನ್ನೂ ಐಸೋಲೇಷನ್‌ನಲ್ಲಿರಿಸುವುದರಿಂದ ಆರೋಗ್ಯ ಸಿಬ್ಬಂದಿಗೆ ಹಾಗೂ ನಿರ್ವಹಣೆಗೆ ಅನುಕೂಲವಾಗಲಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ. ಕರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಡಿಸಿ, ಎಸ್ಪಿಗೆ ಸೂಚನೆ ನೀಡಿದರು.

ಅರ್ಧ ಲೀ., ಹಾಲು ಕೊಡಿ: ಕೊಳಚೆ ಪ್ರದೇಶದ ನಿವಾಸಿಗಳು ಸೇರಿ ಬಡವರು ಇರುವ ಕಡೆ 1ಲೀ., ಬದಲು 1/2 ಲೀ. ಹಾಲನ್ನು ವಿತರಣೆ ಮಾಡಿ. ಅಲ್ಲದೆ, ಅಗತ್ಯವಿದ್ದರೆ 200 ಎಂಎಲ್ ಹಾಲಿನ ಪಾಕೇಟ್‌ಗಳನ್ನು ತಯಾರಿಸಿ ವಿತರಣೆಗೆ ಕ್ರಮವಹಿಸುವಂತೆ ಹಾಲು ಮಹಾಮಂಡಳಿ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ಸಲಹೆ ನೀಡಿದರು.

ಜಿಲ್ಲೆಯಲ್ಲಿರುವ ರೈಸ್‌ಮಿಲ್‌ಗಳನ್ನು ಮತ್ತೆ ಆರಂಭಿಸಲು ಅವಕಾಶ ನೀಡಿದ್ದು ಅವುಗಳಿಗೆ ಅಗತ್ಯವಿರುವ ಕಚ್ಚಾವಸ್ತು ತರಲು, ಕಾರ್ಮಿಕರ ಓಡಾಟಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಇನ್ನೂ ರೈತರು ಬೆಳೆಯುವ ತರಕಾರಿ, ಹಣ್ಣುಗಳನ್ನು ರೈತರಿಂದ ಖರೀದಿಸಿ, ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಸ್ವಯಂ ಸೇವಕರನ್ನು ಬಳಸಿಕೊಂಡು ವಾಹನಗಳ ಮೂಲಕ ಮಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಪಂ ಸಿಇಒ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಉಪಸ್ಥಿತರಿದ್ದರು.

ಚಿಕನ್, ಮಟನ್ ಮನೆಗಳಿಗೆ ಡೆಲಿವರಿ ಕೊಡಿ!: ಕೋಳಿ ಮಾಂಸ, ಮಟನ್ ಮಾರಾಟ ಮಾಡಲು ಅನುಕೂಲ ಕಲ್ಪಿಸಿ. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿ ಹಾಗೂ ಅಂಗಡಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಿ. ಅಲ್ಲದೆ, ಮನೆಮನೆ ಡೆಲಿವರಿ ಮಾಡುವ ವ್ಯವಸ್ಥೆ ಮಾಡಿದರೆ ಸೂಕ್ತ ಎಂದು ಸಚಿವ ಮಾಧುಸ್ವಾಮಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net