ಕಡೂರಲ್ಲಿ ಭೂಜಲ ಯೋಜನೆ

web 2 (1)
Published on

ಚಿಕ್ಕಮಗಳೂರು: ಅಂತರ್ಜಲ ಅಭಿವೃದ್ಧಿಪಡಿಸುವ ಅಟಲ್ ಭೂಜಲ ಯೋಜನೆಗೆ ಜಿಲ್ಲೆಯಲ್ಲಿ ಬರಪೀಡಿತ ಕಡೂರು ತಾಲೂಕು ಆಯ್ಕೆಯಾಗಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಗ್ರಾಮದಲ್ಲಿ 31 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಈ ಯೋಜನೆಗೆ ರಾಜ್ಯದಲ್ಲಿ 41 ತಾಲೂಕುಗಳು ಆಯ್ಕೆಯಾಗಿವೆ. ಕೇಂದ್ರ ಸರ್ಕಾರ 4 ವರ್ಷದಲ್ಲಿ 1208 ಕೋಟಿ ರೂ. ವಿನಿಯೋಗಿಸಲಿದೆ. ಯೋಜನೆ ವ್ಯಾಪ್ತಿಗೆ ಬರುವ ತಾಲೂಕುಗಳ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಮಟ್ಟ ವೃದ್ಧಿಸಲಾಗುವುದು ಎಂದು ಹೇಳಿದರು.

ಆರ್ಥಿಕ ಸಂಕಷ್ಟದ ನಡುವೆಯೂ ಎರಡು ಇಲಾಖೆಗಳಿಂದ ರೈತರ ಜಮೀನಿಗೆ ನೀರುಣಿಸುವ ಮತ್ತು ಜಲ ಸಂರಕ್ಷಣೆ ಮಾಡುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಕಡೂರು ಮತ್ತು ತರೀಕೆರೆ ತಾಲೂಕುಗಳಿಗೆ ಸಂಬಂಧಿಸಿ ಗೋಂದಿ ಯೋಜನೆ ಅನುಷ್ಠಾನಕ್ಕೆ ತಂದು ಕೆರೆ ತುಂಬಿಸಲಾಗುವುದು. ಕರೊನಾ ಜತೆಗೆ ಎರಡೆರಡು ಬಾರಿ ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗಿ ಬಂದರೂ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಬೇಲೂರು ಮತ್ತು ಚಿಕ್ಕಮಗಳೂರು ತಾಲೂಕಿನ ಜನರ ಒತ್ತಡವಿರುವ ಹಿನ್ನೆಲೆಯಲ್ಲಿ ರಣಘಟ್ಟ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ವಿಚಾರದಲ್ಲಿ ಶಾಸಕ ಸಿ.ಟಿ.ರವಿ ಪಾತ್ರ ದೊಡ್ಡದು. ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಅನುಮೋದನೆ ಕೊಡಿಸಿದ್ದಾರೆ ಎಂದರು.

ಕುಡಿಯುವ ನೀರಿನ ಸಂಗ್ರಹ ಹಾಗೂ ಮೂಲ ಇರುವ ಕಡೆಗಳಲ್ಲಿ ಬಳಕೆಯಾದ ನೀರು ಹರಿದು ಹೋಗಲು ಬಿಡಬಾರದು. ಅದು ಭೂಮಿಯಲ್ಲಿ ಇಂಗಿಸುವಂತೆ ಮಾಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net