

ಶೃಂಗೇರಿ: ಜೇಸೀಸ್ ಶಾಲೆ ಅಧ್ಯಾಪಕರು ಮತ್ತು ಸಿಬ್ಬಂದಿಗಳ ಸ್ನೇಹ ಮಿಲನದಿಂದ ನಮ್ಮ ನಡುವಿನ ಬಾಂಧವ್ಯ ಮತ್ತುಷ್ಟು ವೃದ್ಧಿಯಾಗಿದೆ ಎಂದು ಜೇಸೀಸ್ ಶಾಲಾ ನಿವೃತ್ತ ಮುಖ್ಯಶಿಕ್ಷಕ ಶಿವಕುಮಾರ್ ಹೇಳಿದರು.
ಕೆರೆಮನೆಯಲ್ಲಿ ಭಾನುವಾರ ಜೇಸೀಸ್ ಶಾಲೆಯ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ಕು ದಶಕದ ಸಮೀಪದಲ್ಲಿರುವ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಬದುಕಿಗೆ ದಾರಿ ತೋರಿಸಿದೆ. ಹಲವು ವರ್ಷಗಳ ಹಿಂದೆ ಜೆಸಿಐ ಸಂಸ್ಥೆ ಶಿಕ್ಷಣ ಸಂಸ್ಥೆ ಸಚ್ಚಿದಾನಂದಪುರದಲ್ಲಿ ಆರಂಭಿಸಿದ ಶಾಲೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಶಾಲೆ ಕಟ್ಟಲು ನೂರಾರು ಜನರ ಬೆಂಬಲ, ದಾನಿಗಳ ಸಹಕಾರವಿದೆ. ಪ್ರಸ್ತುತ ಶ್ರೀಮಠದ ಕೃಪಾಶೀರ್ವಾದದಿಂದ ಶಾಲೆ ನಡೆಯುತ್ತಿದ್ದು, ಉತ್ತಮ ಲಿತಾಂಶ ಪಡೆಯುತ್ತಿದೆ ಎಂದರು.
ನಿವೃತ್ತ ಶಿಕ್ಷಕ ಗಣಿತವನ ಶಿವಶಂಕರ್ ಮಾತನಾಡಿ, ಜೇಸೀಸ್ ಶಾಲೆ ನನ್ನಂತಹ ಹಲವಾರು ಶಿಕ್ಷಕರಿಗೆ ಆರಂಭಿಕ ಮೆಟ್ಟಿಲಾಗಿದೆ. ಸಾಕಷ್ಟು ಜನರು ನಂತರ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ನೇಹಮಿಲನ ಸಾಮಾನ್ಯವಾಗಿ ವಿದ್ಯಾರ್ಥಿಗಳು ಆಚರಿಸಿಕೊಳ್ಳುತ್ತಾರೆ. ಇಲ್ಲಿನ ಸ್ನೇಹ ಮಿಲನ ವಿಭಿನ್ನವಾಗಿದ್ದು, ಶಾಲೆ ಆರಂಭದಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಉಪನ್ಯಾಸಕರು ಮತ್ತು ಸಿಬ್ಬಂದಿಗಳ ಸ್ನೇಹ ಮಿಲನವಾಗಿದೆ ಎಂದರು.
ಮುಖ್ಯಶಿಕ್ಷಕಿ ಇಂದಿರಾ ವೈದ್ಯ, ಶಿಕ್ಷಕರಾದ ಎಸ್.ಎನ್.ಚಂದ್ರಶೇಖರ್, ರವಿಶಂಕರ್, ವಿಜಯಕುಮಾರಿ, ಮಹಿಮಾ, ವಿನಯ ಕುಮಾರ್, ಗಣೇಶ್, ಶೃತಿ, ಪರಶುರಾಮ್, ಸುವೀರ್‌ಕುಮಾರ್ ಇದ್ದರು.