ಅವಿಭಜಿತ ದ.ಕ. ಜಿಲ್ಲೆಗೆ 24 ಗಂಟೆ ವಿದ್ಯುತ್​ ನೀಡಲು ಆಗ್ರಹ

udp tonse jayakrishna shetty (1)
Published on

ಉಡುಪಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಕಂಪೆನಿ ಉಷ್ಣ ವಿದ್ಯುತ್​ ಸ್ಥಾವರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನಿರಂತರ 24 ?ವಿದ್ಯುತ್​ ಪೂರೈಕೆ ಮಾಡಬೇಕು ಎಂದು ಜಯಶ್ರೀಕೃಷ್ಣ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಉಷ್ಣ ವಿದ್ಯುತ್​ ಸ್ಥಾವರವು ಪ್ರಸ್ತುತ 1300 ಮೆಗಾ ವ್ಯಾಟ್​ ವಿದ್ಯುತ್​ ಉತ್ಪಾದಿಸುತ್ತಿದೆ. ಇಲ್ಲಿಂದ ರಾಜಧಾನಿ ಬೆಂಗಳೂರಿಗೆ ಶೇ 45 ರಷ್ಟು ವಿದ್ಯುತ್​ ಸರಬರಾಜು ಮಾಡಲಾಗುತ್ತಿದೆ. ಮೊದಲು ಅವಿಭಜಿತ ದ.ಕ. ಜಿಲ್ಲೆಗೆ ಅಗತ್ಯವಿರುವಷ್ಟು ವಿದ್ಯುತ್​ ಪೂರೈಕೆ ಮಾಡಬೇಕು. ನಂತರ ಬೇರೆಡೆಗೆ ಕಳುಹಿಸಿ ಕೊಡಲು ನಮ್ಮ ಅಭ್ಯಂತರವಿಲ್ಲ ಎಂದರು.

ಈ ಯೋಜನೆ ಜಾರಿಗೆ ಬರಲು ಸಮಿತಿ ನಿರಂತರವಾಗಿ 6 ವರ್ಷ ಹೋರಾಟ ಮಾಡಿತ್ತು. ಯೋಜನೆ ಜಾರಿಗೆ ಬಂದ ಮೇಲೆ ಅಂದಿನ ಇಂಧನ ಸಚಿವ ಕೆ.ಎಸ್​. ಈಶ್ವರಪ್ಪ ಅವರು ಕೊಲ್ಲೂರಿಗೆ ಬಂದಿದ್ದಾಗ, ಅವರನ್ನು ಭೇಟಿಯಾಗಿ ಅವಳಿ ಜಿಲ್ಲೆಗಳಿಗೆ ನಿರಂತರ 24 ಗಂಟೆ ವಿದ್ಯುತ್​ ಪೂರೈಕೆ ಮಾಡುವಂತೆ ಮನವಿ ಮಾಡಿದ್ದೆವು. ಅದಕ್ಕೆ ಸಚಿವರು ಒಪ್ಪಿ ಸ್ಥಳದಲ್ಲಿಯೇ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಉಷ್ಣ ವಿದ್ಯುತ್​ ಸ್ಥಾವರದ ಪ್ರಮುಖರಿಗೆ ಸೂಚನೆ ನೀಡಿದ್ದರು. ಆದರೇ ಈ ಸೂಚನೆ ಇನ್ನೂ ಜಾರಿಗೆ ಬಂದಿಲ್ಲ. ಆದ್ದರಿಂದ ಸರ್ಕಾರ ತಕ್ಷಣ ಈ ಎರಡೂ ಜಿಲ್ಲೆಗಳಿಗೆ ದಿನ 24 ಗಂಟೆಯೂ ವಿದ್ಯುತ್​ ಪೂರೈಕೆಯಾಗುವಂತೆ ಮಾಡಬೇಕು. ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್​ ಅವರನ್ನು ಸಮಿತಿಯ ನಿಯೋಗವು ಭೇಟಿಯಾಗಿ ಚರ್ಚಿಸಲಿದೆ ಎಂದವರು ಹೇಳಿದರು. ಸಮಿತಿಯ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್​, ಉಪಾಧ್ಯಕ್ಷರಾದ ಕೆ.ಪಿ.ಜಗದೀಶ್​ ಅಧಿಕಾರಿ, ಪ್ರೊ. ಶಂಕರ್​, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net