

ಮೈಸೂರು: ಈಗ ಉತ್ತಮ ಸದಭಿರುಚಿಯ ಸಿನಿಮಾಗಳು ವಿರಳವಾಗುತ್ತಿದ್ದು, ಕರ್ಕಶ ಶಬ್ದಗಳ ಅಸಹಜ ಸಾಹಸ ದೃಶ್ಯಗಳು ಹಾಗೂ ಕ್ರೂರತ್ವ ವೈಭವೀಕರಿಸುವ ಸನ್ನಿವೇಶಗಳಿಂದ ತುಂಬಿರುವ ಸಿನಿಮಾಗಳು ಹೆಚ್ಚಾಗುತ್ತಿವೆ ಎಂದು ದೇವರಾಜ ಉಪವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಶಾಂತಮಲ್ಲಪ್ಪ ಆತಂಕ ವ್ಯಕ್ತಪಡಿಸಿದರು.
ಅದಮ್ಯ ರಂಗಶಾಲೆಯ ವತಿಯಿಂದ ನಗರದ ಜೆ.ಎಲ್.ಬಿ. ರಸ್ತೆಯ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪಠ್ಯಾಧರಿತ ರಂಗ ಪ್ರದರ್ಶನ ಹಾಗೂ ಅದಮ್ಯ ರಂಗಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂತಹ ಕೆಟ್ಟ ಸಿನಿಮಾಗಳು, ಧಾರವಾಹಿಗಳಿಂದ ಹಾಗೂ ಅವ್ಯಾಹತ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ. ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣದಲ್ಲೇ ಸದಾ ಮುಳುಗಿರುವುದರಿಂದ ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಚಟುವಟಿಕೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇರುನಟ ಡಾ.ರಾಜಕುಮಾರ್ ಸೇರಿದಂತೆ ಚಲನಚಿತ್ರರಂಗದ ನೂರಾರು ಕಲಾವಿದರಿಗೆ ರಂಗಭೂಮಿ ಕ್ಷೇತ್ರವೇ ಅಭಿನಯ ಕಲಿಸಿದ ಮೂಲವಾಗಿದೆ. ಆದ್ದರಿಂದ ಯುವಜನರು ಮೊಬೈಲ್ಗೆ ದಾಸರಾಗದೆ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡು, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ ತಮ್ಮಲ್ಲಿರುವ ಪ್ರತಿಭೆಯ ಪ್ರದರ್ಶನ ಮಾಡಬೇಕೆಂದು ಸಲಹೆ ನೀಡಿದರು.
ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ.ಸತೀಶ್ ಜವರೇಗೌಡ ಮಾತನಾಡಿ, ಪಠ್ಯದ ವಸ್ತುವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಲು ರಂಗರೂಪಕ ಸಹಕಾರಿಯಾಗುತ್ತದೆ. ಕೇಳಿ ಕಲಿಯುವ ರೀತಿಗಿಂತ ನೋಡಿ ಕಲಿಯುವ ರೀತಿ ಪರಿಣಾಮಕಾರಿಯಾದದ್ದು. ಆದ್ದರಿಂದ ದೃಶ್ಯ ಮಾಧ್ಯಮದ ಮೂಲಕ ಕಲಿಯುವ ವಿಷಯ ಅಚ್ಚಳಿಯದೆ ಉಳಿಯುತ್ತದೆ ಎಂದರು.
ಪರೀಕ್ಷೆಯ ದೃಷ್ಟಿಯಿಂದ ಮಾತ್ರ ವಿದ್ಯಾರ್ಥಿಗಳು ಪಠ್ಯವಸ್ತು ಕಲಿಯುವುದು ಔಚಿತ್ಯವಲ್ಲ. ಪಠ್ಯ ವಿಷಯದ ವಿಚಾರಗಳನ್ನು ಹೃದಯಕ್ಕೆ ಇಳಿಸಿಕೊಳ್ಳಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಕಲಿಕೆ ಸಾರ್ಥಕವಾಗುತ್ತದೆ. ಈ ದಿಕ್ಕಿನಲ್ಲಿ ರಂಗಾಸಕ್ತಿ ಮೈಗೂಡಿಸಿಕೊಂಡು ಅನುಭವಾತ್ಮಕ ಕಲಿಕೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಂಗನಟಿ, ನಿರ್ದೇಶಕಿ ಹಾಗೂ ಸಂಪನ್ಮೂಲ ವ್ಯಕ್ತಿ ಜಯಶ್ರೀ ಇಡ್ಕಿದು ಅವರಿಗೆ ‘ಅದಮ್ಯ ರಂಗಚೇತನ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಬಳಿಕ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಕನ್ನಡ ಭಾಷಾ ವಿಷಯದ ನಾಲ್ಕು ಕಥೆಗಳ ಕೇಂದ್ರಿತ ‘ಪಠ್ಯಾಧಾರಿತ ರಂಗ ಪ್ರದರ್ಶನ’ ನಡೆಯಿತು.
ಪ್ರಾಂಶುಪಾಲ ಎನ್.ಉದಯಶಂಕರ್, ನಗರಪಾಲಿಕೆಯ ಮಾಜಿ ಸದಸ್ಯ ಪಿ.ಪ್ರಶಾಂತಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎ.ಎಲ್.ಉಮೇಶ್, ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ರಂಗನಟ ಮನೋಜ್, ಸಮರ್ಪಣ ಸಂಸ್ಥೆಯ ಸದಸ್ಯ ಎಸ್. ಸಚಿನ್ ಇದ್ದರು.