ಜಯಶ್ರೀ ಇಡ್ಕಿದು ಅವರಿಗೆ ‘ಅದಮ್ಯ ರಂಗಚೇತನ ಪ್ರಶಸ್ತಿ’

11
Published on

ಮೈಸೂರು: ಅದಮ್ಯ ರಂಗಶಾಲೆಯ ವತಿಯಿಂದ ಪಿಯುಸಿ ಪಠ್ಯಾಧಾರಿತ ರಂಗ ಪ್ರದರ್ಶನ ಹಾಗೂ ಅದಮ್ಯ ರಂಗಚೇತನ ಪ್ರಶಸ್ತಿ ಪ್ರದಾನ ಸಮಾರಂಭವು ಡಿ.14 ರಂದು ಬೆಳಗ್ಗೆ 10 ಗಂಟೆಗೆ ನಗರದ ಜೆಎಲ್‌ಬಿ ರಸ್ತೆಯ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.

ದೇವರಾಜ ಉಪವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಶಾಂತಮಲ್ಲಪ್ಪ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಎನ್. ಉದಯಶಂಕರ್ ಅಧ್ಯಕ್ಷತೆ ವಹಿಸುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ.ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡುವರು. ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪಿ.ಪ್ರಶಾಂತಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎ.ಎಲ್.ಉಮೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು. ಇದೇ ಸಂದರ್ಭದಲ್ಲಿ ಯುವ ರಂಗಕರ್ಮಿ ಜಯಶ್ರೀ ಇಡ್ಕಿದು ಅವರಿಗೆ ‘ಅದಮ್ಯ ರಂಗಚೇತನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಮತ್ತು ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಜಯಶ್ರೀ ಇಡ್ಕಿದು ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದವರು. ಮೈಸೂರಿನ ರಂಗಾಯಣದ ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ ರಂಗ ಶಿಕ್ಷಣ ಪಡೆದ ಬಳಿಕ ಜಟಾಯು ಮೋಕ್ಷ, ವೇಣಿ ಸಂಹಾರ, ದೇಹಭಾನ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಯಹೂದಿ ಹುಡುಗಿ, ಪುಂಟೀಲಾ, ದ ನನ್ನೊಳು ನೀ ನಿನ್ನೊಳು ನಾ ಸೇರಿದಂತೆ ಮೊದಲಾದ ನಾಟಕಗಲ್ಲಿ ಮನೋಜ್ಞವಾಗಿ ಅಭಿನಯಿಸಿ ರಂಗಪ್ರೇಕ್ಷಕರ ಮನಗೆದ್ದಾರೆ. ಅಭಿನಯ ಕಲೆ ಒಲಿದ ಬಳಿಕ ಜಯಶ್ರೀ ಅವರು ನಾಟಕ ನಿರ್ದೇಶನದಲ್ಲಿ ತೊಡಗಿದರು. ಬಿರುಗಾಳಿ, ಕೂಹೂ ಕೂಹೂ ಕೋಗಿಲೆ, ಕಾರ್ಣಿಕೊದ ಕಲ್ಕುಡೆ (ತುಳು) ನಾಟಕಗಳ ನಿರ್ದೇಶನ ಮಾಡಿ ತಮ್ಮ ಪ್ರತಿಭೆಯ ಛಾಪು ಮೂಡಿಸಿದರು. ಪ್ರತಿಭಾನ್ವಿತ ಕವಯತ್ರಿಯಾಗಿರುವ ಇವರು ಜೊತೆಗಾರ ಮತ್ತು ಸಾಕ್ಷಿಯಾಗಿದ್ದೇನೆ ಎಂಬ ಕವನ ಸಂಕಲನಗಳನ್ನು ಹೊರತಂದಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net