ಮಹಾತ್ಮರ ಸಾಲಿಗೆ ಸೇರುವ ಲೋಕನಾಯಕ ಜೆಪಿ: ವಿಚಾರವಾದಿ ಕೆ.ಮಾಯಿಗೌಡ ಅಭಿಮತ

1
Published on

ಮಂಡ್ಯ: ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಲೋಕನಾಯಕ ಜಯಪ್ರಕಾಶ ನಾರಾಯಣ ಅವರು ಮಹಾತ್ಮರ ಸಾಲಿಗೆ ಸೇರುತ್ತಾರೆ ಎಂದು ವಿಚಾರವಾದಿ ಕೆ.ಮಾಯಿಗೌಡ ಹೇಳಿದರು.

ಲೋಕನಾಯಕ ಜಯಪ್ರಕಾಶ ನಾರಾಯಣ ಜನ್ಮದಿನಾಚರಣೆ ಅಂಗವಾಗಿ ನಗರದ ಕಲಾಮಂದಿರದ ಪಕ್ಕದಲ್ಲಿರುವ ಜೆ.ಪಿ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಜೆಪಿ ಅವರು ಮಹಾತ್ಮರ ಸಾಲಿಗೆ ಸೇರುತ್ತಾರೆ. ಗಾಂಧೀಜಿ ಅವರಿಗಿಂತ ಜೆಪಿ ಉದಾತ್ತ ಭಾವನೆ ಇಟ್ಟುಕೊಂಡಿದ್ದವರು. ದೇಶದಲ್ಲಿ ಇಂದಿರಾಗಾಂಧಿ ಅವರಿಂದ ಹೇರಲ್ಪಟ್ಟ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದವರು. ಅಂತೆಯೇ, ಕೇಂದ್ರದಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆ ಮಾಡುವಲ್ಲಿ ಜೆಪಿ ಪಾತ್ರ ದೊಡ್ಡದಿದೆ. ಈ ಎಲ್ಲ ಕಾರಣಗಳಿಂದ ಅವರಿಗೆ ಜನಸಾಗರವೇ ಲೋಕನಾಯಕ ಎನ್ನುವ ಬಿರುದು ಕೊಟ್ಟಿದೆ ಎಂದು ಹೇಳಿದರು.

ಜೆಪಿ ಸ್ಮಾರಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೌಡ್ಲೆ ಚನ್ನಪ್ಪ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಗೆ ಸವಾಲಾಗಿದ್ದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದ ವಿರುದ್ಧ ಜೆಪಿ ಅವರು ದೇಶಾದ್ಯಂತ ಚಳವಳಿಗೆ ಕರೆಕೊಟ್ಟು ಸಂಪೂರ್ಣ ಕ್ರಾಂತಿಯನ್ನು ಹುಟ್ಟು ಹಾಕಿದರು. ಅಂದು ಜನತೆ ಚಳವಳಿಗೆ ಧುಮುಕಿದರು. ಇದರ ವಿರುದ್ಧವಾಗಿ ಅಂದಿನ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿ ಜಾರಿಗೆ ತಂದಿತು. ಸಾವಿರಾರು ಮುಖಂಡರ ಜತೆಗೆ ದೇಶಪ್ರೇಮಿಗಳು ಮತ್ತು ಪ್ರಜಾತಂತ್ರ ಪ್ರೇಮಿಗಳು ಸೆರೆಮನೆ ವಾಸವನ್ನು ಅನುಭವಿಸಿದ್ದಲ್ಲದೇ ಸುಮಾರು ಒಂದೂವರೆ ವರ್ಷಗಳ ಕಾಲ ಇವರು ಜೈಲಿನಲ್ಲಿರಬೇಕಾಯಿತು ಎಂದರು.

ಜೈಲಿನಿಂದಲೇ ಎಲ್ಲ ದೇಶಭಕ್ತರು, ರಾಜಕೀಯ ಪಕ್ಷಗಳನ್ನು ಒಂದುಗೂಡಿಸಿದ್ದರಿಂದ ಜನತಾ ಪಕ್ಷ ರಚನೆಯಾಗಲು ಕಾರಣವಾಯಿತು. ತುರ್ತು ಪರಿಸ್ಥಿತಿಯ ನಂತರ ನಡೆದ ಮಹಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸೋಲನ್ನು ಅನುಭವಿಸಿತು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಗೆ ಕೊಟ್ಟ ಗೌರವವನ್ನು ಬೇರೆ ಹೋರಾಟಗಾರರಿಗೆ ಕೊಡಲಿಲ್ಲ. 1970ರಲ್ಲಿ ಜೆಪಿ ಅವರು ಮಂಡ್ಯಕ್ಕೆ ಬಂದು ಭಾಷಣ ಮಾಡಿದ ಜೆಪಿ ವಿದ್ಯಾಸಂಸ್ಥೆಯ ಸ್ಥಳವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಮಾರಕ ಮಾಡುವಂತೆ ಒತ್ತಾಯಿಸಿ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಹೇಳಿದರು.

ಜೆಪಿ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎಚ್.ನಾರಾಯಣ್, ವೈ.ಎಸ್.ಸಿದ್ದರಾಜು, ಬಿ.ವಿವೇಕಾನಂದ, ದಳವಾಯಿ ಕೋಡಹಳ್ಳಿ ಚಂದ್ರಶೇಖರ್, ಸಿದ್ದರಾಮೇಗೌಡ ಇತರರಿದ್ದರು. ಇದೇ ಸಂದರ್ಭದಲ್ಲಿ ಜೆಪಿ ಅವರ ಸಂಪೂರ್ಣ ಕ್ರಾಂತಿಯ ಸಮಯದಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸಿದ ಡಾ.ಟಿ.ಎಲ್.ಲಿಂಗಯ್ಯ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net