ಅನ್ನಪೂರ್ಣೇಶ್ವರಿ ದರ್ಶನ ಪಡೆದ ಜಯಪ್ರಕಾಶ್ ಹೆಗ್ಡೆ

7kls2
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಶ್ರೀಕ್ಷೇತ್ರ ಹೊರನಾಡು ದೇವಸ್ಥಾನಕ್ಕೆ ಭೇಟಿ ನೀಡಿದರು. ನಯನಾ ಮೋಟಮ್ಮ, ಎಂ.ಪಿ.ಕುಮಾರಸ್ವಾಮಿ, ಕೆ.ಎ.ಶ್ರೇಣಿಕ್ ಇತರರಿದ್ದರು.
Published on

ಕಳಸ: ಪಟ್ಟಣದಲ್ಲಿ ಏರ್ಪಡಿಸಿದ್ದ ಸಮಾವೇಶಕ್ಕೂ ಮುನ್ನ ಜಯಪ್ರಕಾಶ್ ಹೆಗ್ಡೆ ಅವರು ಕಳಸದ ಕಲಶೇಶ್ವರ ದೇವಸ್ಥಾನ ಮತ್ತು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಜನಪ್ರತಿನಿಧಿಗಳು ಜನಸಾಮಾನ್ಯರ ಕೆಲಸ ಮಾಡಬೇಕು. ಕಾಂಗ್ರೆಸ್ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಈಡೇರಿಸಿದೆ. ಹಿಂದಿನ ಸರ್ಕಾರ ಏನು ಮಾಡಿದೆ? ಕಾಂಗ್ರೆಸ್ ಸರ್ಕಾರ ಏನು ಮಾಡಿದೆ? ಎಂಬುದರ ಬಗ್ಗೆ ಮತದಾರರಿಗೆ ಅರಿವು ಮೂಡಿಸಬೇಕು. ಬಿಜೆಪಿ ಅಭ್ಯರ್ಥಿ ಗ್ಯಾರಂಟಿ ಯೋಜನೆ ಕೊಡುವುದಿಲ್ಲ, ಪುಸ್ತಕದ ಒಳಗೆ ಇಟ್ಟ ನವಿಲು ಗರಿ ಮರಿ ಹಾಕುವುದಿಲ್ಲ ಅಂತ ಹೇಳಿದ್ದರು. ಆದರೆ ಈಗ ಪುಸ್ತಕದ ಒಳಗೆ ಇಟ್ಟ ನವಿಲು ಗರಿ ಮರಿ ಹಾಕಿಲ್ಲ, ನವಿಲು ಮೊಟ್ಟೆ ಇಟ್ಟು ಮರಿ ಮಾಡಿದೆ ಎಂದು ಟಾಂಗ್ ಕೊಟ್ಟರು.
ಕ್ಷಮೆ ಕೇಳಿದ ಎಂ.ಪಿ.ಕುಮಾರಸ್ವಾಮಿ: ಈ ಹಿಂದೆ ನಾನು ಬಿಜೆಪಿಯಲ್ಲಿದ್ದೆ. ಆ ಸಂದರ್ಭದಲ್ಲಿ ಪಕ್ಷದ ಶಿಸ್ತು ಮತ್ತು ನಿಷ್ಠೆಯಂತೆ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನೋವುಂಟುಮಾಡಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್‌ನ ತತ್ವ-ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ಕಾಂಗ್ರೆಸ್ ಎಲ್ಲ ಆಯಾಮದಲ್ಲೂ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪಕ್ಷವಾಗಿದೆ. ಕಾಂಗ್ರೆಸ್‌ಗೆ ಉಜ್ವಲ ಭವಿಷ್ಯ ಇದೆ. ಹತ್ತು ವರ್ಷಗಳಲ್ಲಿ ಕೇಂದ್ರದ ಅಭಿವೃದ್ಧಿ ಶೂನ್ಯ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲೂ ಕಾಂಗ್ರೆಸ್ ಪಾರಮ್ಯ ಸಾಧಿಸಲಿದೆ. ಕಳಸದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಬಿಜೆಪಿಯ ಮುಖಂಡರನ್ನು ಕಾಂಗ್ರೆಸ್‌ಗೆ ಕರೆತಂದು ಬಿಜೆಪಿ ಶಕ್ತಿಯನ್ನು ಮತ್ತಷ್ಟು ಕುಗ್ಗಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net