ಕೊಕ್ಕರ್ಣೆ ಒಳಬೈಲು ಕೂಡುಕಟ್ಟು ಪ್ರದೇಶಕ್ಕೆ ಜಯಪ್ರಕಾಶ್ ಹೆಗ್ಡೆ ಭೇಟಿ

bheti
Published on

ಕೊಕ್ಕರ್ಣೆ: ಕುಡುಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು 2007ರಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಳಿಕ ಶಾಸಕರಾದ ಕೆ.ರಘುಪತಿ ಭಟ್ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿ ಗರಿಷ್ಠ ಪ್ರಯತ್ನ ನಡೆಸಿದ್ದು, ಅಧ್ಯಯನ ವರದಿ ಅಂತಿಮ ಹಂತದಲ್ಲಿದೆ.

ಸರ್ವರ ಸಹಕಾರದಿಂದ ಈ ಬೇಡಿಕೆ ಈಡೇರಿಸಲು ಪ್ರಯತ್ನ ನಡೆಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಅಧ್ಯಕ್ಷರ ನೇತೃತ್ವದ ನಿಯೋಗವು ಸೋಮವಾರ ಕುಡುಬಿ ಜನಾಂಗದ ವಸ್ತುಸ್ಥಿತಿ ಪರಿಶೀಲನೆಗಾಗಿ ಕೊಕ್ಕರ್ಣೆ ಸಮೀಪದ ಒಳಬೈಲು ಕೂಡುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿತು.

ಕುಡುಬಿ ಸಮಾಜ ಸಂಘ ಗೋಳಿಯಂಗಡಿ ಅಧ್ಯಕ್ಷ ಎಂ.ಕೆ.ನಾಯ್ಕ ಮಿಯಾರು ಜನಾಂಗದ 16 ಅಂಶಗಳ ಬೇಡಿಕೆಯನ್ನು ಆಯೋಗದ ಮುಂದಿರಿಸಿ, ಶಾಸಕ ಕೆ.ರಘುಪತಿ ಭಟ್ ಅವರಿಗೆ ಸಲ್ಲಿಸಿದರು. ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ.ಸುವರ್ಣ, ರಾಜಶೇಖರ, ಕಲ್ಯಾಣ ಕುಮಾರ, ಅರುಣ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಅಧಿಕಾರಿ ದಯಾನಂದ, ಮಂದಾರ್ತಿ ಕ್ಷೇತ್ರ ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಕೊಕ್ಕರ್ಣೆ ಗ್ರಾಪಂ ಸದಸ್ಯರು, ಕುಡುಬಿ ಸಮುದಾಯದವರು ಉಪಸ್ಥಿತರಿದ್ದರು. ಕುಡುಬಿ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಗೋಳಿಯಂಗಡಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ನರಸಿಂಹ ನಾಯ್ಕ ವಂದಿಸಿದರು.

ಕುಡುಬಿ ಜನಾಂಗದ ಅಭಿವೃದ್ಧಿಗಾಗಿ ಜಿಲ್ಲಾ ಕುಡುಬಿ ಸಮುದಾಯ ಭವನ ನಿರ್ಮಾಣ, ಮೀಸಲಾತಿ ಬಗ್ಗೆ ಹೋರಾಟ ನಡೆಸಿದ್ದು, ಈ ಬಗ್ಗೆ ಅನೇಕ ಕಾರ್ಯಕ್ರಮಗಳು ಅನುಷ್ಠಾನಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಕುಡುಬಿ ಕೂಡುಕಟ್ಟಿಗೆ ಸಮುದಾಯ ಭವನ ನಿರ್ಮಾಣದ ಗುರಿಯಿದೆ. ಬೇಡಿಕೆಗಳ ಬಗ್ಗೆ ಗರಿಷ್ಠ ಪ್ರಯತ್ನ ನಡೆಸಲಾಗುವುದು.

- ಕೆ.ರಘುಪತಿ ಭಟ್, ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net