

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರವಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಸರ್ವಾಧಿಕಾರಿಧೋರಣೆ ನೀತಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಟೀಕಿಸಿದರು.
ಸಮ್ಮೇಳನದ ನೇತೃತ್ವವನ್ನು ಮಹೇಶ ಜೋಶಿಗೆ ನೀಡಬಾರದು. ಬದಲಿಗೆ ಜಿಲ್ಲಾ ಉಸ್ತುವಾರಿ ಮಂತ್ರಿ ವಹಿಸಬೇಕು. ಪರಿಷತ್ ಅಧ್ಯಕ್ಷರೊಬ್ಬರೆ ಸಾಹಿತ್ಯ ಸಮ್ಮೇಳನವನ್ನು ಮಾಡುತ್ತಿಲ್ಲ. ಅವರು ಹೇಳಿಕೆ ನೀಡುವ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಚರ್ಚಿಸಬೇಕು. ಕಸಾಪ, ರಾಜ್ಯಸರ್ಕಾರ ಹಾಗೂ ಜಿಲ್ಲಾಡಳಿತ ಸೇರಿ ಸಮ್ಮೇಳನ ನಡೆಸುತ್ತಿವೆ. ಆದರೆ ಪರಿಷತ್ ಒಂದೇ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಸಮ್ಮೇಳನ ನಡೆಯುವ ಸ್ಥಳದ ವಿಚಾರವಾಗಿ ಅಧ್ಯಕ್ಷರು ಏಕೆ ಹೇಳಿಕೆ ನೀಡಬೇಕು. ನಗರದೊಳಗೆ ಸಮ್ಮೇಳನ ನಡೆಯಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದ್ದು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಸಮ್ಮೇಳನಕ್ಕೆ ಸರ್ಕಾರದಿಂದ 25 ಕೋಟಿ ರೂ ನೀಡುತ್ತಿದ್ದು, ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡುವ ತೀರ್ಮಾನವನ್ನು ಜಿಲ್ಲಾ ಸರ್ಕಾರಿ ನೌಕರರು ಘೋಷಿಸಿದ್ದಾರೆ. ಆದ್ದರಿಂದ ನಗರದ ಸಾಂಸ್ಕೃತಿಕ ಪೋಷಕತೆಯ ಸ್ಥಳಗಳ ವ್ಯವಸ್ಥೆಯನ್ನು ಸರಿಪಡಿಸುವತ್ತಾ ಜಿಲ್ಲಾಡಳಿತ ಗಮನಹರಿಸಬೇಕು ಎಂದು ತಾಕೀತು ಮಾಡಿದರು.
ರೈತ ಸಭಾಂಗಣ, ಅಂಬೇಡ್ಕರ್ ಭವನಗಳು ಅವ್ಯವಸ್ಥೆಯಿಂದ ಕೂಡಿದ್ದು, ಎಲ್ಲಿಯೂ 300 ಜನ ಕುಳಿತು ಸಭೆ ನಡೆಸುವಂತಹ ಸಭಾಂಗಣದ ವ್ಯವಸ್ಥೆ ಇಲ್ಲದಂದಾಗಿದೆ. ಸುಮಾರು 2 ಕೋಟಿ ರೂ ವ್ಯಯಿಸಿದರೆ ಸಾಂಸ್ಕೃತಿಕ ಪೋಷಕ ಸ್ಥಳಗಳು ಸುವ್ಯವಸ್ಥೆಯನ್ನು ಕಲ್ಪಿಸಬಹುದಾಗಿದೆ. ಡಿಜಿಟಲ್ ಮಾಧ್ಯಮ ಯುಗದಲ್ಲಿ ಸಮ್ಮೇಳನ ನಡೆಯುವುದು ಜಗತ್ತಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ 36 ಲಕ್ಷ ರೂ ವ್ಯಯಿಸಿ ಪ್ರಚಾರ ರಥ ನಿರ್ಮಿಸುವ ಬದಲಿಗೆ ಮಿನಿ ಸಭಾಂಗಣ, ಓಪನ್ ಥಿಯೇಟರ್ ನಿರ್ಮಿಸಬಹುದಿತ್ತು. ಪತ್ರಿಕೆ, ಮಾಧ್ಯಮಗಳ ಮೂಲಕ ಪ್ರಚಾರ ನಡೆಸಬಹುದಿತ್ತು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಒಂದು ಅಂಗವೆಂಬಂತೆ ಬಿಂಬಿತವಾಗಿದೆ. ಆದರೆ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೌಪ್ಯತೆ ಕಾಪಾಡದೇ ವಿವಾದಕ್ಕೆ ಎಡೆ ಮಾಡಿದ್ದಾರೆ. 1994ರಲ್ಲಿ ನಡೆದ ಸಮ್ಮೇಳನ ವ್ಯವಸ್ಥಿತ ರೀತಿಯಲ್ಲಿ ನಡೆದಿತ್ತು ಎಂಬ ಮಾತು ಇಂದಿಗೂ ಇದೆ. ಅಂದು ಉಳಿದ ಹಣದಲ್ಲಿ ಸ್ಥಳೀಯ ಸಾಂಸ್ಕೃತಿಕ ಪೋಷಕ ಸ್ಥಳಗಳ ನಿರ್ಮಾಣ, ಅಭಿವೃದ್ಧಿ ಮಾಡಲಾಗಿತ್ತು. ಸಮ್ಮೇಳನಕ್ಕೆ ಘೋಷಣೆಯಾಗಿರುವ 25 ಕೋಟಿ ರೂ.ನಲ್ಲಿ ಯಾವ ಕಾರಣಕ್ಕೆ ಖರ್ಚಾಗಲಿದೆ ಎಂಬುದನ್ನು ಬಹಿರಂಗ ಪಡಿಸಬೇಕು. ಅಖಿಲ ಭಾರತ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಸ್ಥಳೀಯವಾಗಿ ಆಗಬೇಕಾದ ರಸ್ತೆ ಸೇರಿದಂತೆ ಹಲವು ಮೂಲ ವ್ಯವಸ್ಥೆಗಳನ್ನು ಸರಿಪಡಿಸಲು ಮುಂದಾಗಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಯಾಗಬೇಕು ಎಂದು ಒತ್ತಾಯಿಸಿದರು.
ಕನ್ನಡ ನಾಡಿನ ನೆಲ, ಜಲ, ಅಭಿವೃದ್ಧಿಗೆ ಸಾಹಿತ್ಯ ಪರಿಷತ್ ಹೋರಾಟ ಮಾಡಿಲ್ಲ. ಆಧುನಿಕ ಸಾಹಿತ್ಯ, ಪ್ರಾಚೀನ ಸಾಹಿತ್ಯದ ಕುರಿತು ಯಾವುದೇ ಸಮ್ಮೇಳನ ನಡೆಸದ ಪರಿಷತ್ ಕನ್ನಡ ಆಡಳಿತ ಭಾಷೆ, ಕನ್ನಡ ಮಾಧ್ಯಮಗಳ ಬಗ್ಗೆ ಧ್ವನಿಯೆತ್ತದೆ ಸರ್ಕಾರದ ಜತೆ ಕೈ ಜೋಡಿಸುವ ಕೆಲಸ ಮಾಡುತ್ತಿದೆ. ಸಮ್ಮೇಳನ ಮಾಡಿ ಲೆಕ್ಕ ಕೊಡುವುದೇ ಉದ್ದಿಮೆಯಾಗಿಸಿಕೊಂಡಿದೆ ಎಂದು ಕಿಡಿಕಾರಿದ ಜಯಪ್ರಕಾಶಗೌಡ, ಡಿ.10ರೊಳಗೆ ರಂಗಮಂದಿರವನ್ನು ಸಿದ್ದಗೊಳಿಸುವುದರ ಜತೆಗೆ ಆತಗೂರು ಶಾಸನವನ್ನು ಸ್ಥಾಪಿಸದೇ ಹೋದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು. ಇದಲ್ಲದೆ ಸ್ಥಳೀಯ ಕಲಾವಿದರು, ಮಹಿಳೆಯರು, ಸಾಹಿತಿಗಳಿಗೆ ಅವಕಾಶ ನೀಡಬೇಕು. ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳ ಹೆಸರು ವೇದಿಕೆಯಲ್ಲಿ ಪ್ರಸ್ತುತತೆಗೆ ತರಬೇಕು ಎಂದು ಆಗ್ರಹಿಸಿದರು.
ಸಮ್ಮೇಳನದ ಸಿದ್ದತೆ ನಡೆಯುತ್ತಿದ್ದು, ಮಂಡ್ಯ ನಗರಕ್ಕೆ ಕನಿಷ್ಟವಾದ ಸೌಲಭ್ಯಗಳನ್ನು ಒದಗಿಸಬೇಕು. ಪೂರ್ಣ ಪ್ರಮಾಣದಲ್ಲಿ ಸರ್ಕಾರ ಹಣ ಒದಗಿಸುತ್ತಿದ್ದು, ಇದನ್ನು ಕಸಾಪ ಸಾಹಿತ್ಯ ಸಮ್ಮೇಳನವನ್ನಾಗಿ ಪರಿಗಣಿಸದೇ, ಅಖಿಲ ಭಾರತ ಸಾಹಿತ್ಯ ಸಮ್ಮೇಳನವನವೆಂದು ತಿಳಿದು ಇಲ್ಲಾಗುವ ತೀರ್ಮಾನಗಳೆಲ್ಲವೂ ಉಸ್ತುವಾರಿ ಸಚಿವರ ಮೂಲಕವೇ ಆಗಬೇಕು. ಕಸಾಪ ಅಧ್ಯಕ್ಷರು ತಮ್ಮ ವೈಯಕ್ತಿಕ ಹೇಳಿಕೆ ನೀಡುವುದು ನಿಲ್ಲಿಸುವಂತೆ ಸಚಿವರು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ನಿವೃತ್ತ ಪ್ರಾಂಶುಪಾಲ ಶಂಕರೇಗೌಡ, ಕರ್ನಾಟಕ ಸಂಘದ ನಿರ್ದೇಶಕ ನಾಗಪ್ಪ, ರಾಜಶೇಖರ್, ಸುರೇಶ್ ಇದ್ದರು.