ಚೈತನ್ಯದ ಚಿಲುಮೆ ಜಯಪ್ರಕಾಶಗೌಡ: ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಹೇಳಿಕೆ

Jayaprakash Gowda Award Ceremony Mandya
Published on

ಮಂಡ್ಯ: ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರು ಚೈತನ್ಯದ ಚಿಲುಮೆಯಾಗಿ ಛಲ ಬಿಡದೆ ಹಿಡಿದ ಕೆಲಸವನ್ನು ಸಾಧಿಸುವ ಮನೋಭಾವ ಹೊಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕರ್ನಾಟಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪ್ರೊ.ಬಿ.ಜಯಪ್ರಕಾಶಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಮತ್ತು ಪುರಸ್ಕೃತರಿಗೆ ಗೌರವ ತಂದು ಕೊಡುವ ರೀತಿ ಸಾಧಕರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಪ್ರಶಸ್ತಿಗೆ ಒಂದು ಗೌರವ ದೊರಕಿದೆ ಎಂದು ಪ್ರಶಂಸಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ರಂಗಭೂಮಿಗೆ ನೂರಾರು ಕಲಾವಿದರನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಜಯಪ್ರಕಾಶಗೌಡ ಅವರು ಕರ್ನಾಟಕ ಸಂಘಕ್ಕೆ ಹೊಸ ಆಯಾಮ ತಂದುಕೊಟ್ಟು ರಾಜ್ಯದಲ್ಲಿ ಮನೆಮಾತಾಗುವಂತೆ ಮಾಡಿದ್ದಾರೆ. ಕರ್ನಾಟಕ ಸಂಘದಲ್ಲಿ 60 ಪ್ರಶಸ್ತಿ ಸ್ಥಾಪಿಸಿರುವ ಹಿರಿಮೆ ಹೊಂದಿರುವ ಜಯಪ್ರಕಾಶಗೌಡ ಅವರು ಎತ್ತರದ ಕನಸುಗಾರರಾಗಿ ಕನಸುಗಳನ್ನು ಆಗುಮಾಡುವ ರಚನಾತ್ಮಕ ಶಕ್ತಿ ಇದೆ. ಜೆಪಿ ಹೆಸರಿನಲ್ಲಿ ಸ್ಥಾಪಿಸಿರುವ ಚೊಚ್ಚಲ ಪ್ರಶಸ್ತಿ ನಿರಂತರವಾಗಿ ನಡೆದುಕೊಂಡು ಹೋಗಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಕೆ.ವಿ.ಶಂಕರಗೌಡರ ಗರಡಿಯಲ್ಲಿ ಪಳಗಿದ ಜೆಪಿ ಅವರು ಸಾಹಿತ್ಯ, ಕಲೆ, ರಂಗಭೂಮಿ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಿಗೆ ಸಮಾಜಮುಖಿಯಾಗಿ ವೇದಿಕೆ ರೂಪಿಸಿದವರು. ಅವರು ತಮ್ಮ ಕಾರ್ಯಕ್ರಮದ ಮೂಲಕ ಮಂಡ್ಯದ ಹಿರಿಮೆಯನ್ನು ನಾಡಿನಲ್ಲಿ ಎತ್ತಿ ಹಿಡಿದಿರುವ ಸಾಂಸ್ಕೃತಿಕ ರಾಯಭಾರಿ. ಶಿಸ್ತು ಸರಳತೆಯಿಂದ ಜನರ ಮನಸ್ಸಿನ ಭಾವನೆ ಸಮಾಜಮುಖಿಯಾಗುವಂತೆ ಮಾಡಿ ಹೊಸ ಬದುಕು ತೋರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಪ್ರೊ.ಬಿ.ಜಯಪ್ರಕಾಶಗೌಡ, ಕೆ.ಎಸ್.ಮಂಜುಳಾ, ಕರ್ನಾಟಕ ಸಂಘದ ಪದಾಧಿಕಾರಿಗಳಾದ ಹರೀಶ್‌ಕುಮಾರ್, ಲೋಕೇಶ್ ಚಂದಗಾಲು, ವಿಜಯಲಕ್ಷ್ಮೀ ರಘುನಂದನ್, ಅನಿತಾ ಇತರರಿದ್ದರು.

ಇದೇ ವೇಳೆ ಜಲ ಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಂ ರಾಯಪುರ ಅವರಿಗೆ ಸಂಘಟನಾ ಪ್ರಶಸ್ತಿ ಹಾಗೂ ರಂಗಭೂಮಿ ನಿರ್ದೇಶಕ ಬಿ.ಸುರೇಶ್ ಅವರಿಗೆ ರಂಗಭೂಮಿ ಪ್ರಶಸ್ತಿಯನ್ನು ತಲಾ 50 ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net