

ಆಳಂದ: ಮಹಾತ್ಮರು, ಶರಣರು ಹಾಗೂ ರಾಷ್ಟ್ರ ನಾಯಕರ ಜಯಂತಿಗಳನ್ನು ಆಚರಿಸಿದರೆ ಸಾಲದು, ಅವರ ತತ್ವ ಹಾಗೂ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ನಡೆಸಬೇಕು ಎಂದು ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ಕರೆ ನೀಡಿದರು.
ಶ್ರೀ ರಾಮ ಮಾರ್ಕೆಟ್ ಆವರಣದಲ್ಲಿ ಬಸವ ಜಯಂತ್ಯುತ್ಸವ ಸಮಿತಿ, ಬಸವ ಸೇನೆ ಹಾಗೂ ಬಸವಪರ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಬಸವಣ್ಣನವರ ೮೯೧ನೇ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂದಿನ ಆಧುನಿಕ ಯುಗದಲ್ಲಿ ಯುವಕರು ಪಾಶ್ಚಿಮಾತ್ಯ ಸಾಂಸ್ಕೃತಿಗೆ ಮಾರು ಹೋಗಿ ದಾರಿ ತಪ್ಪುತ್ತಿದ್ದಾರೆ. ಅವರಿಗೆ ಉತ್ತಮ ಸಂಸ್ಕಾರ ನೀಡಿ, ಸರಿ ದಾರಿಗೆ ತರುವ ಕೆಲಸ ಆಗಬೇಕಿದೆ. ದುಶ್ಚಟಗಳಿಂದ ದೂರವಿದ್ದು, ಶರಣರು, ರಾಷ್ಟç ನಾಯಕರ ಬದುಕನ್ನು ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಿ. ಸಮಾಜದ ಪ್ರಜ್ಞಾವಂತ ನಾಗರಿಕರಾಗಿ ಜೀವಿಸಿ ಎಂದು ಹೇಳಿದರು.
ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹಾಗೂ ಬೀದರ್, ಕಲಬುರಗಿ, ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್ ಮಾತನಾಡಿ, ಎಲ್ಲ ಬಸವಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಅಚ್ಚುಕಟ್ಟಾಗಿ ಬಸವ ಜಯಂತಿ ಆಚರಿಸಲಾಗಿದೆ. ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಎಲ್ಲರೂ ಉತ್ತಮ ಶಿಕ್ಷಣ ಪಡೆದು, ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ನಿಂಬರ್ಗಾದ ಶ್ರೀ ಶಿವಲಿಂಗ ದೇವರು, ಭೂಸನೂರಿನ ಶ್ರೀ ಬಸವಲಿಂಗ ದೇವರು, ಚಲಗೇರಾದ ಶ್ರೀ ಶಾಂತವೀರ ಶಿವಾಚಾರ್ಯರು, ಹಿರೋಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಸವ ಸೇನೆ ತಾಲೂಕು ಅಧ್ಯಕ್ಷ ನಿಂಗರಾಜ ಪಾಟೀಲ್, ಪ್ರಮುಖರಾದ ಚಿನ್ನಾ ಪಾಟೀಲ್, ಆನಂದ ದೇಶಮುಖ, ಗುರುಗೌಡ ಪಾಟೀಲ್, ದತ್ತಾತ್ರೇಯ ಗುತ್ತೇದಾರ್, ಸಿದ್ದರಾಮ ಪ್ಯಾಟಿ, ವಿಶ್ವನಾಥ ಪಾವಡಶೆಟ್ಟಿ, ಮಲ್ಲಿಕಾರ್ಜುನ ಕಂದಗೂಳೆ, ಈರಣ್ಣ ಹತ್ತರಕಿ, ಮಲ್ಲಿಕಾರ್ಜುನ ತಡಕಲ್, ರಾಜಶೇಖರ ಯಂಕAಚಿ, ಶರಣಬಸಪ್ಪ ವಗ್ಗೆ, ಚಂದ್ರಶೇಖರ ಶೇಗಜಿ ಇತರರಿದ್ದರು
ಅದ್ದೂರಿ ಮೆರವಣಿಗೆ: ಬಸವ ಜಯಂತಿ ನಿಮಿತ್ತ ಆಳಂದನ ಪ್ರಮುಖ ಬೀದಿಗಳಲ್ಲಿ ಶ್ರೀ ಬಸವೇಶ್ವರರ ಅಶ್ವಾರೂಢ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು. ಶ್ರೀರಾಮ ಮಾರ್ಕೆಟ್ ಆವರಣದಲ್ಲಿ ಪೂಜ್ಯರು ಹಾಗೂ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು. ಬಸ್ ನಿಲ್ದಾಣ, ರಜ್ವಿ ರಸ್ತೆ, ಸಿದ್ದಾರ್ಥ ಚೌಕ್, ಹಳೆಯ ತಹಸಿಲ್ ಕಚೇರಿ, ಭವಾನಿ ಮಂದಿರ, ಗಣೇಶ ಚೌಕ್ ಮಾರ್ಗ ಹನುಮಾನ ಮಂದಿರದವರೆಗೂ ವೈಭವದಿಂದ ಮೆರವಣಿಗೆ ನಡೆಯಿತು. ಗೊಂಬೆ ಕುಣಿತ, ವಿವಿಧ ವಾದ್ಯಗಳು ಗಮನಸೆಳೆದವು. ಎಲ್ಲೆಡೆ ಬಸವ ಧ್ವಜಗಳು ರಾರಾಜಿಸಿದವು. ಅಸಂಖ್ಯಾತ ಬಸವ ಭಕ್ತರು ಜೈಕಾರ ಹಾಕುತ್ತಾ ಹೆಜ್ಜೆ ಹಾಕಿದರು.