

ಬಸವಕಲ್ಯಾಣ: ಬಸವಣ್ಣನವರ ಅರಿವಿನ ಮನೆ ಪಕ್ಕದಲ್ಲೇ ಹಡಪದ ಅಪ್ಪಣ್ಣನವರ ಗವಿ ಇದೆ ಎಂದು ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಬಿಕೆಡಿಬಿ ಕಲ್ಯಾಣ ಮಂಟಪಂದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಶರಣ ನಿಜಸುಖಿ ಹಡಪದ ಅಪ್ಪಣ್ಣನವರ ೮೯೦ನೇ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಬಸವಣ್ಣನವರು ಇರುವೆಡೆ ಹಡಪದ ಅಪ್ಪಣ್ಣ ಇರುವುದು ಸತ್ಯ. ಸತ್ಯಕ್ಕಾಗಿ ನಿಮ್ಮೊಂದಿಗೆ ನಾವಿರುತ್ತೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಂಗಡಗಿಯ ಶ್ರೀ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಇದ್ದಲ್ಲಿ ಅಪ್ಪಣ್ಣನವರು ಇರುತ್ತಾರೆ. ಹೀಗಾಗಿ ಅರಿವಿನ ಮನೆ ಪಕ್ಕದಲ್ಲಿಯೇ ಹಡಪದರ ಗವಿ ಇದೆ. ಗವಿಗೆ ಅಳವಡಿಸಿದ್ದ ಫಲಕ ಯಾರೋ ತೆಗೆದಿದ್ದು, ಸರಿಪಡಿಸದಿದ್ದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ತಂಗಡಗಿಯ ಶ್ರೀ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ನಾಡಿನಾದ್ಯಂತ ಅಪ್ಪಣ್ಣನವರ ತತ್ವ-ಸಂದೇಶಗಳ ಪ್ರಚಾರ ಮಾಡುತ್ತಿದ್ದಾರೆ. ಕಾಯಕನಿಷ್ಠ ಈ ಸಮಾಜ ಪ್ರಗತಿಯಾಗಬೇಕು. ಸಮಾಜಕ್ಕೆ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬಸವ ಮಹಾಮನೆಯ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ವೈದ್ಯ ಬಸವರಾಜ ಪಂಡಿತ ಗುರೂಜಿ, ಸಮಾಜದ ಕಲಬುರಗಿ ಅಧ್ಯಕ್ಷ ವೀರಣ್ಣ ಸಣ್ಣೂರ ಮಾತನಾಡಿದರು. ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಸಾನ್ನಿಧ್ಯ, ಮಂಠಾಳದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಡಾ.ಅಮರನಾಥ ಸೋಲಪುರೆ, ಬಿಜೆಪಿ ಮುಖಂಡ ಪ್ರದೀಪ ವಾತಡೆ, ಹಡಪದ ಅಪ್ಪಣ್ಣ ಸಮಾಜ ಸಂಘದ ತಾಲೂಕು ಅಧ್ಯಕ್ಷ ಅಮೃತ ಹಡಪದ, ಹಡಪದ ಲಿಂಗಮ್ಮ ಮಹಾಶಕ್ತಿ ಕೂಟದ ಅಧ್ಯಕ್ಷೆ ಸೋನಾಲಿ ನೀಲಕಂಠೆ, ಪಾಂಡುರಂಗ ಹಡಪದ, ದತ್ತಾತ್ರೆ ಬಾಂದೇಕರ್, ಜಗದೀಶ ನೆಲವಾಡಕರ್, ಸದಾನಂದ ಮಂಠಾಳ, ಶಾಣಪ್ಪ ಬೆಟಬಾಲಕುಂದಾ, ಕಲ್ಯಾಣಿ ಹಡಪದ, ಶರಣು ಮುಚಳಂಬ, ಸೋಮನಾಥ ನೆಲವಾಡಕರ್ ಇತರರಿದ್ದರು.
ಹಡಪದ ಅಪ್ಪಣ್ಣ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವರಾಜ ನೀಲಕಂಠೆ ಸ್ವಾಗತಿಸಿದರು. ಬಸವರಾಜ ಕರಹರಿ ಪ್ರಾಸ್ತಾವಿಕ ಮಾತನಾಡಿದರು. ದತ್ತಾತ್ರಿ ಮೂಲಗೆ ವಂದಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ವಚನ ಮಾಣಿಕ್ಯ ಶಿವಶರಣ ಹಡಪದ ಅಪ್ಪಣ್ಣ, ಶರಣೆ ಲಿಂಗಮ್ಮನವರ ಆಯ್ದ ವಚನಗಳು ಗ್ರಂಥ ಬಿಡುಗಡೆ ಮಾಡಲಾಯಿತು. ಇದಕ್ಕೂ ಮುನ್ನ ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಬಿಕೆಡಿಬಿ ಕಲ್ಯಾಣ ಮಂಟಪವರೆಗೆ ಅಪ್ಪಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
ಬಸವಣ್ಣವರು ಸಮಾನತಾವವಾದಿ. ಅವರ ಹೆಸರು ಹೇಳಿ ಜಾತೀಯತೆ ಮಾಡುವವರು ಬಸವ ತತ್ವ ಅನುಯಾಯಿಗಳೇ ಅಲ್ಲ. ಎಲ್ಲರೂ ನಮ್ಮವರು ಎಂಬ ಭಾವ ಎಲ್ಲರಲ್ಲಿ ಬರಬೇಕು. ಅಂದಾಗಲೇ ಬಸವಣ್ಣವರ ಅನುಯಾಯಿಗಳು ಎಂದು ಹೇಳಿಕೊಳ್ಳಲು ಅರ್ಥ ಬರುತ್ತದೆ.
| ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಅಧ್ಯಕ್ಷರು, ಬಸವ ಮಹಾಮನೆ ಟ್ರಸ್ಟ್