ಶರಣರಿಂದ ಸಾಮಾಜಿಕ, ಧಾರ್ಮಿಕ ಕ್ರಾಂತಿ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

Jayantyotsava of Kayaka Saranara Mandya
Published on

ಮಂಡ್ಯ: ಹನ್ನೇರಡನೆಯ ಶತಮಾನದಲ್ಲಿ ವಚನ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕವಾದ ದೊಡ್ಡ ಕ್ರಾಂತಿ ಉಂಟು ಮಾಡುವಲ್ಲಿ ಶರಣರ ಪಾತ್ರ ದೊಡ್ಡದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾಯಕ ಶರಣರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಷರ ತಿಳಿಯದಂತಹ ಜನರಿಗೆ ಅವರದೇ ಭಾಷೆಯಲ್ಲಿ ಸಾಹಿತ್ಯವನ್ನು ಸರಳವಾಗಿ ತಿಳಿಸುವ ಮೂಲಕ ಒಂದು ಹೊಸ ಭಾಷೆಯ ಕ್ರಾಂತಿ ಉಂಟು ಮಾಡಿದಂತಹ ಅನೇಕ ಶರಣರಿದ್ದಾರೆ. ಅಂದು ಅನೇಕ ಶರಣರು ಅನೇಕ ವಿಚಾರ ಕುರಿತು ಜನರಿಗೆ ತಿಳಿಸುವಂತಹ ಕಾರ್ಯ ಮಾಡಿದ್ದಾರೆ. ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಶರಣರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಇಂದಿನ ಮಕ್ಕಳಿಗೆ ತಿಳಿಸಿದಲ್ಲಿ ಮಾತ್ರ ಆದರ್ಶ ಜೀವನ ನಡೆಸಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕಾಯಕ ಶರಣರು ಮಾಡಿರುವ ಕೆಲಸಗಳಿಂದ ನಾವು ಅವರನ್ನು ನೆನೆಸಿಕೊಳ್ಳುತ್ತೇವೆ. ಕಾಯಕವನ್ನು ನಾವು ಎಷ್ಟು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂಬುದು ಮುಖ್ಯ. ಒಳ್ಳೆಯ ಕಾಯಕ ನಮಗೆ ಗೌರವ ತಂದು ಕೊಡುತ್ತದೆ. ಆದ್ದರಿಂದ ನಮಗೆ ಸಿಕ್ಕಂತಹ ಅವಕಾಶವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ನಿವೃತ ಕನ್ನಡ ಪ್ರಾಧ್ಯಾಪಕ ಮಹದೇವ ಅವರು ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಡಾ.ರೋಹಿಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net