

ಗುಂಡ್ಲುಪೇಟೆ: ಅನ್ನ ದಾಸೋಹದ ಜತೆಗೆ ಜ್ಞಾನ ಹಾಗೂ ಆರೋಗ್ಯ ದಾಸೋಹ ನಡೆಸುವ ಮೂಲಕ ಶ್ರೀ ರಾಜೇಂದ್ರ ಸ್ವಾಮೀಜಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಡಾ.ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೆಎಸ್‌ಎಸ್ ಸಂಸ್ಥೆಗೆ ಗುಂಡ್ಲುಪೇಟೆ ಬಗ್ಗೆ ವಿಶೇಷ ಕಾಳಜಿ ಇದೆ. ತಾಲೂಕಿನ ಸಾವಿರಾರು ಯುವಕರಿಗೆ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಒದಗಿಸಿ ಜೀವನ ನೀಡಿದ್ದಾರೆ. ಶಿಕ್ಷಣ ಆರೋಗ್ಯ ವೃತ್ತಿಪರ ಎಲ್ಲದರಲ್ಲೂ ಜೆಎಸ್‌ಎಸ್ ಸಂಸ್ಥೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಎಷ್ಟೊ ಜನರ ಹಸಿವು ನೀಗಿಸಿ ಆಶ್ರಯ ನೀಡಿ ಜ್ಞಾನ ದಾಸೋಹ ನೀಡಿದ ಕೀರ್ತಿ ರಾಜೇಂದ್ರ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ರಾಜೇಂದ್ರ ಶ್ರೀಗಳ ದೂರದೃಷ್ಟಿಯ ಪರಿಣಾಮ ಗ್ರಾಮಾಂತರ ಪ್ರದೇಶಗಳಲ್ಲಿಯೂ ಶಾಲಾ, ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಯುವ ಜನತೆಗೆ ಉದ್ಯೋಗ ದೊರಕುವಂತಾಗಿದೆ. ಮೈಸೂರಿನಲ್ಲಿ ಆಸ್ಪತ್ರೆ ತೆರೆದು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಕಾರಣರಾಗಿದ್ದಾರೆ ಎಂದು ಹೇಳಿದರು.
ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ದೇಶದಲ್ಲಿರುವ ಪ್ರತಿಷ್ಠಿತ ಕಂಪನಿಗಳ ಸಿಇಒಗಳಾಗಿದ್ದಾರೆ. ಶ್ರೀ ರಾಜೇಂದ್ರ ಮಹಾಸ್ವಾಮೀಜಿ ಉನ್ನತ ವಿದ್ಯಾಭ್ಯಾಸ ಮಾಡಿರಲಿಲ್ಲ. ಆದರೆ ಅವರ ಬದುಕೇ ಒಂದು ಪಾಠ, ಆದರ್ಶವಾಗಿತ್ತು. ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ಅನ್ಯರಿಗೆ ಮನನೋಯಿಸದಂತೆ ಬದುಕಿದ್ದರು. ಮಠದ ವತಿಯಿಂದ ಸಂಸ್ಕೃತ ಪಾಠ ಮೊದಲು ಪ್ರಾರಂಭವಾಯಿತು. ಇದೀಗ ನಡೆಯುತ್ತಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಶ್ರೀಗಳು ಎಪ್ಪತ್ತು ವರ್ಷಗಳ ಹಿಂದೆಯೇ ಪ್ರಾರಂಭಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕತುಪ್ಪೂರು ಶಿವಪೂಜಾ ಮಠದ ಚನ್ನವೀರಸ್ವಾಮೀಜಿ, ಗೊಪಾಲಪುರ ಕಬ್ಬಿನ ಕೋಲೇಶ್ವರಮಠದ ಗಂಗಾಧರ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ಕಮರಹಳ್ಳಿ ರವಿ, ಕಾಲೇಜಿನ ಪ್ರಾಂಶುಪಾಲೆ ಡಾ. ಮಹದೇವಮ್ಮ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಕೆ.ಎಸ್.ಮಹೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣ ಪ್ರಕಾಶ್ ಮತ್ತಿತರರಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ಜೆಎಸ್‌ಎಸ್ ಕಾಲೇಜಿನಿಂದ ಶ್ರೀ ರಾಜೇಂದ್ರ ಸ್ವಾಮೀಜಿ ಭಾವಚಿತ್ರವನ್ನು ಬೆಳ್ಳಿ ರಥದ ಮೇಲಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಪದವಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.