

ಮಳವಳ್ಳಿ : ಸರ್ವ ಸಮುದಾಯ ಒಗ್ಗೂಡಿ ಮಳವಳ್ಳಿಯಲ್ಲಿ ಶಿವರಾತ್ರಿ ಶಿವಯೋಗಿಗಳ ಜಯಂತ್ಯುತ್ಸವ ಆಚರಣೆ ಮುಂದಾಗಿರುವುದು ಧಾರ್ಮಿಕ ಪರಂಪರೆ ಹಾಗೂ ಸಮಾನತೆಯನ್ನು ಸಾರುತ್ತಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಆಚರಣೆ ಸಂಬಂಧ ಗುರುವಾರ ಪಟ್ಟಣದ ಮೈಸೂರು ರಸ್ತೆಯ ತಾಲೂಕು ಪಂಚಾಯಿತಿ ಸಮೀಪದಲ್ಲಿ ತೆರೆದಿರುವ ಜಯಂತಿ ಮಹೋತ್ಸವ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ಶಿವರಾತ್ರೀಶ್ವರರ ಜಯಂತ್ಯುತ್ಸವವನ್ನು ಆಚರಿಸಬೇಕೆಂದು ತಾಲೂಕಿನ ಎಲ್ಲ ಪಕ್ಷ, ಜಾತಿ, ಧರ್ಮಗಳ ಮುಖಂಡರ ಒಕ್ಕೊರಲ ನಿರ್ಧಾರ ಗುರುಪರಂಪರೆಯ ಮೇಲೆ ಜನ ಸಮುದಾಯಕ್ಕೆ ಇರುವ ಭಕ್ತಿ ಹಾಗೂ ನಂಬಿಕೆಗಳನ್ನು ಸಾಬೀತು ಪಡಿಸುತ್ತದೆ. ಡಿಸೆಂಬರ್ 18 ರಿಂದ 5 ದಿನಗಳ ಕಾಲ ಶಿವಯೋಗಿಗಳ ಜಯಂತಿ ಮಹೋತ್ಸವ ನೆರವೇರಲಿದ್ದು, ಅಂದಿನ ಸಮಾರಂಭದ ಪೂರ್ವ ಸಿದ್ಧತೆಗಳ ಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲು ಹಾಗೂ ಜಯಂತ್ಯುತ್ಸವ ಇತರ ಕಾರ್ಯ ಚಟುವಟಿಕೆಗಳ ಬಗ್ಗೆ ಸಭೆಗಳನ್ನು ನಡೆಸಲು ಕಾರ್ಯಾಲಯವನ್ನು ತೆರೆದಿರುವುದು ಯಶಸ್ಸಿಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಏಳು ವರ್ಷಗಳ ನಂತರ ಮಂಡ್ಯ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ಆಚರಣೆಗೆ ಅವಕಾಶ ದೊರೆತಿದ್ದು, ಪಟ್ಟಣದಲ್ಲಿ ನಡೆಯುವ ಸಮಾರಂಭದ ಅಷ್ಟೂ ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸಿಕೊಡುವುದಾಗಿ ಭರವಸೆ ನೀಡಿದರು.
ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವಸ್ವಾಮೀಜಿ, ಜೆಎಸ್‌ಎಸ್ ಮಹಾ ವಿದ್ಯಾಪೀಠ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ತಾಲೂಕಿನ ವಿವಿಧ ಮಠಾಧೀಶರು, ಕೆಎಂಎಫ್ ಮಾಜಿ ನಿರ್ದೇಶಕ ವಿ.ಎಂ.ವಿಶ್ವನಾಥ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ, ಉಪಾಧ್ಯಕ್ಷ ಮಾಗನೂರು ರಾಜು, ತಾಲೂಕು ಅಧ್ಯಕ್ಷ ಮೂರ್ತಿ, ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಮುಖಂರಾದ ಯಮದೂರು ಸಿದ್ದರಾಜು, ಅಂಬರೀಶ್, ರಾಮಕೃಷ್ಣ, ಪುಟ್ಟುಬುದ್ದಿ, ಆರ್.ಎಸ್.ಸುರೇಶ್, ತೊಟ್ಟಿಮನೆ ಚನ್ನಪ್ಪ, ಗಜೇಂದ್ರ ಸೇರಿದಂತೆ ಹಲವರಿದ್ದರು.