

ಉಡುಪಿ: ವರ್ಚುವಲ್ ಜಗತ್ತು ಮನುಷ್ಯನಿಗೆ ಶಾಪವಾಗಿ ಕಾಡುತ್ತಿದ್ದು, ಭೌತಿಕ ರೂಪದಿಂದ ಮನುಷ್ಯರನ್ನು ದೂರಗೊಳಿಸುತ್ತಿದೆ. ಎಲ್ಲರನ್ನು ಒಳಗೊಂಡಂತೆ ಸೃಷ್ಟಿ ಬೆಳವಣಿಗೆಯಾಗಿದ್ದು, ಕಲೆ ಸಂಯುಕ್ತ ವಿಕಸನದ ಮಾರ್ಗ ಎಂದು ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ಬುಧವಾರ ಎಂಜಿಎಂ ಕಾಲೇಜಿನಲ್ಲಿ ಸಂಸತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಕೊಡಮಾಡಿದ ವಿಶ್ವಪ್ರಭಾ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ದೇಹದ ವಿವಿಧ ಅಂಗಗಳ ತಜ್ಞರು ಜೊತೆಯಾಗಿ ರೋಗಿಯ ನೋವು ಕಡಿಮೆ ಮಾಡುವಂತೆ ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಸಂಯುಕ್ತವಾಗಿ ಬೆಳೆಯುವುದಕ್ಕೆ ಪ್ರಯತ್ನಿಸಬೇಕು. ಒಬ್ಬನಿಂದ ಬದುಕಲ್ಲ. ಎಲ್ಲರೂ ಜೊತೆಯಿದ್ದಾಗ ಬದುಕು ಎಂದು ಹೇಳಿದರು.
ನಾಡೋಜ ಪ್ರೊ.ಕೆ.ಪಿ ರಾವ್ ಸಭಾಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಭಾಷಣ ಮಾಡಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೆಶಕಿ ಪೂರ್ಣಿಮಾ , ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ, ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಪ್ರಭಾವತಿ ಶೆಣೈ, ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಶಂಕರ್, ಕಾರ್ಯದರ್ಶಿ ನಾಗರಾಜ ಹೆಬ್ಬಾರ್ ಉಪಸ್ಥಿತರಿದ್ದರು. ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿ, ಶಿಲ್ಪಾ ಜೋಷಿ ನಿರೂಪಿಸಿದರು.