ಜಯಲಕ್ಷ್ಮೀ ವಿಲಾಸ ಅರಮನೆಯನ್ನು ಮೈಸೂರು ವಿವಿಯೇ ನಿರ್ವಹಣೆ ಮಾಡಲಿ: ಪ್ರೊ.ಶಶಿಧರ್ ಪ್ರಸಾದ್

JayalakshmiVilasMansion
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿನ ಜಯಲಕ್ಷ್ಮೀ ವಿಲಾಸ ಅರಮನೆಯನ್ನು ಬೇರೊಂದು ಇಲಾಖೆಗೆ ಗುತ್ತಿಗೆಗೆ ನೀಡದೇ, ಕಟ್ಟಡ ದುರಸ್ತಿಗೊಳಿಸಿ ನಿರ್ವಹಣೆ ಮಾಡಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ. ಶಶಿಧರ್ ಪ್ರಸಾದ್ ಒತ್ತಾಯಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿವಿಗೆ ಒಂದು ಕ್ಯಾಂಪಸ್‌ನ ಅಗತ್ಯತೆಯನ್ನು ಮನಗಂಡು ರಾಜವಂಶಸ್ಥರಿಂದ ಜಯಲಕ್ಷ್ಮೀ ವಿಲಾಸ ಅರಮನೆ ಸೇರಿದಂತೆ 360 ಎಕರೆ ಜಾಗ ಖರೀದಿಸಿ ಮಾನಸಂಗೋತ್ರಿಯನ್ನು ಕಟ್ಟಿದರು. ಆದರೆ ಇಂದು ವಿಶ್ವವಿದ್ಯಾಲಯ ಅರಮನೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಶಿಥಿಲಾವಸ್ಥೆ ತಲುಪಿದೆ. ಜತೆಗೆ ದುರಸ್ತಿಗೆ ಕೋಟ್ಯಂತರ ಹಣ ಬೇಕಾಗಿದೆ. ಇದನ್ನೆ ನೆಪಮಾಡಿಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಕನ್ನಡ ಅತ್ಯುನ್ನತ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಬಿಟ್ಟುಕೊಡಲು ನಿರ್ಧರಿಸಿದೆ ಎಂದು ಭಾನುವಾರ ಆರೋಪಿಸಿದರು.
ಸದ್ಯಕ್ಕೆ ಕಟ್ಟಡದಲ್ಲಿ ಜಾನಪದ ವಸ್ತುಸಂಗ್ರಹಾಲಯವಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಜತೆಗೆ ವಿಶ್ವವಿದ್ಯಾಲಯವೇ ಸರ್ಕಾರದಿಂದ ಅನುದಾನ ಪಡೆದು ಜಯಲಕ್ಷ್ಮೀ ವಿಲಾಸ ಅರಮನೆಯನ್ನು ದುರಸ್ತಿ ಮಾಡಿ, ನಿರ್ವಹಣ ಮಾಡಬೇಕು ಎಂದು ಆಗ್ರಹಿಸಿದರು.
ಮೈಸೂರು ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಡಾ.ಕೆ. ಮಹದೇವ್ ಮಾತನಾಡಿ, 2001ರಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಸುಧಾಮೂರ್ತಿ ಅವರು 1.7 ಕೋಟಿ ರೂ. ವೆಚ್ಚದಲ್ಲಿ ಸ್ವತಹ ತಾವೇ ಜಯಲಕ್ಷ್ಮೀ ವಿಲಾಸ ಅರಮನೆಯನ್ನು ದುರಸ್ತಿ ಮಾಡಿಸಿದ್ದರು. ಈ ವೇಳೆ ಕಟ್ಟಡವನ್ನು ಅನ್ಯ ಉದ್ದೇಶಗಳಿಗೆ ಬಳಸದೇ, ಈಗಿರುವ ಜಾನಪದ ವಸ್ತು ಸಂಗ್ರಹಾಲಯವನ್ನು ನಡೆಸಿಕೊಂಡು ಹೋಗುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಈಗಿನ ವಿವಿ ಆಡಳಿತ ಮಂಡಳಿ ಕಟ್ಟಡವನ್ನು 30 ವರ್ಷಗಳ ಅವಧಿಗೆ ಬೇರೊಂದು ಇಲಾಖೆಗೆ ಗುತ್ತಿಗೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವೂ ಇಲ್ಲ. ಹಾಗಾಗಿ ಕೂಡಲೇ ವಿಶ್ವವಿದ್ಯಾಲಯ ತನ್ನ ನಿರ್ಧಾರವನ್ನು ಬದಲಿಸಬೇಕು. ಇಲ್ಲವಾದರೆ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸ್ , ಪರಿಸರ ಹೋರಾಟಗಾರ್ತಿ ಭಾನುಮೋಹನ್, ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net