

ಸಿದ್ದಾಪುರ: ಸಮೀಪದ ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ವೈ.ಆರ್.ಜಯಲಕ್ಷ್ಮಿ ಅಧ್ಯಕ್ಷರಾಗಿ ಹಾಗೂ ಎಂ.ಎನ್.ವಿಜು ಉಪಾಧ್ಯಕ್ಷರಾಗಿ ಅವಿರೋಧವಾಗಿ ಮಂಗಳವಾರ ಆಯ್ಕೆಗೊಂಡರು.
17 ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಗೆ ಮಂಗಳವಾರ ಚುನಾವಣೆ ಜರುಗಿತು. ಅಧ್ಯಕ್ಷೆ ಆಕಾಂಕ್ಷಿಯಾಗಿ ವೈ.ಆರ್.ಜಯಲಕ್ಷ್ಮಿ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಎಂ.ಎನ್.ವಿಜು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು ಪ್ರತಿಸ್ಪರ್ಧಿಗಳಿಲ್ಲದ ಕಾರಣ ಅವರನ್ನೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. 17 ಸದಸ್ಯರ ಪೈಕಿ ಒಬ್ಬ ಸದಸ್ಯೆ ಗೈರು ಹಾಜರಾಗಿದ್ದರು.
ವಿರಾಜಪೇಟೆ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿಯಾಗಿದ್ದ ಪಿ.ಸಿ.ಪ್ರವೀಣ್ ಚುನಾವಣಾ ಪ್ರಕ್ರಿಯೆ ನಡೆಸಿದರು. ಅಧಿಕಾರಿ ಗಣೇಶ್, ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಶ್ರೀಕಾಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಇತರರು ಇದ್ದರು.
ಬಹುತೇಕ ಬಿಜೆಪಿ ಬೆಂಬಲಿತ ಸದಸ್ಯರು ಹೊಂದಿರುವ ಪಂಚಾಯಿತಿ ಆಡಳಿತಕ್ಕೆ ಅಧ್ಯಕ್ಷರು -ಉಪಾಧ್ಯಕ್ಷರ ಆಯ್ಕೆ ಬಗ್ಗೆ ಆಕಾಂಕ್ಷಿಗಳ ಪೈಪೋಟಿ ಇತ್ತಾದರೂ ಪಕ್ಷದ ಮುಖಂಡರ ನಿರ್ಧಾರದಂತೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅಯ್ಕೆ ನಡೆದಿದೆ ಎಂದು ಬಿಜೆಪಿ ಮುಖಂಡ ರತೀಶ್ ಕುಮಾರ್ ತಿಳಿಸಿದರು.